ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದ್ದ ಆನೆ ಬಂಡೀಪುರದ ರಾಮಾಪುರ ಬಿಡಾರದಲ್ಲಿ ಸಾವು…

45
firstsuddi

ಚಾಮರಾಜನಗರ: ಬಂಡೀಪುರದ ರಾಮಾಪುರ ಆನೆ ಬಿಡಾರದಲ್ಲಿ ಆನೆ ಮೃತಪಟ್ಟಿದೆ.

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸೆರೆ ಹಿಡಿಯಲಾಗಿದ್ದ ತಣ್ಣೀರ್ ಕೊಂಬನ್ ಎಂಬ ಆನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರದ ಅರಣ್ಯಕ್ಕೆ ಬಿಟ್ಟಿದ್ದರು. ಈ ತಣ್ಣೀರ್ ಕೊಂಬನ್ ಆನೆ ಕೇರಳದ ವಯನಾಡು ವ್ಯಾಪ್ತಿಯ ಮಾನಂದವಾಡಿ ಪಟ್ಟಣದ ಜನನಿಬೀಡ ಪ್ರದೇಶಕ್ಕೆ ನುಗ್ಗಿತ್ತು.

ಈ ವಿಚಾರ ತಿಳಿದು ಕೇರಳದ ಅರಣ್ಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆನೆಗೆ ಡಾಟಿಂಗ್ ಮಾಡಿ ಸೆರೆ ಹಿಡಿದು, ಲಾರಿಯಲ್ಲಿ ಬಂಡೀಪುರದ ರಾಮಾಪುರ ಆನೆ ಶಿಬಿರಕ್ಕೆ ನಿನ್ನೆ ರಾತ್ರಿ ಕರೆತಂದಿದ್ದರು.

ಆದರೆ, ದಿಢೀರನೇ ಆನೆ ಅಸುನೀಗಿದ್ದು, ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಆನೆ ಸಾವಾಗಿದೆ. ಸಮರ್ಪಕ ಮೂಲಸೌಕರ್ಯಗಳು, ಎಲ್ಲ ವ್ಯವಸ್ಥೆಗಳು ಲಭ್ಯವಾಗುವ ತನಕ ಆನೆಯನ್ನು ಸೆರೆ ಹಿಡಿಯಬಾರದು ಎಂದು ಪರಿಸರ ಹೋರಾಟಗಾರ ಹೂವರ್ ಆಗ್ರಹಿಸಿದ್ದಾರೆ.