ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಸಿಲಿಂಡರ್ ಸುನಿಲ ಹಾಗೂ ಅವಿನಾಶ್ ಬಂಧಿತ ರೌಡಿಗಳು. ಕಾಮಾಕ್ಷಿಪಾಳ್ಯದ ರೌಡಿ ಶೀಟರ್ ಕುಣಿಗಲ್ ಗಿರಿ ಕೊಲೆಗೆ ಜೈಲಿನಿಂದಲೇ ಸ್ಕೆಚ್ ಹಾಕಿದ್ದು, ರಾಬರಿ ಕಿಟ್ಟಿಯಿಂದ ಸುಪಾರಿ ಪಡೆದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಬರಿ ಕಿಟ್ಟಿ , ಕ್ಯಾಪ್ಟರ್ ಸೂರಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ. ಕುಣಿಗಲ್ ಗಿರಿಯನ್ನು ಮುಗಿಸಬೇಕೆಂದುಕೊಂಡಿದ್ದ ರಾಬರಿ ಕಿಟ್ಟಿ, ತನ್ನ ಶಿಷ್ಯನಾದ ಸಿಲಿಂಡರ್ ಸುನಿಲನಿಗೆ ಸುಪಾರಿ ನೀಡಿದ್ದ. ಈ ಸಿಲಿಂಡರ್ ಸುನಿಲ ಕೆಂಗೇರಿ ಠಾಣೆಯ ರೌಡಿಶೀಟರ್ ಆಗಿದ್ದಾನೆ.
ಸದ್ಯ ಸಿಲಿಂಡರ್ ಸುನಿಲ ಹಾಗೂ ಅವಿನಾಶ್ ಎಂಬವರನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಮತ್ತಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










