ಹುಬ್ಬಳ್ಳಿ: ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ ಹಿರೇಮಠ ಪುತ್ರಿ ನೇಹಾ ಹತ್ಯೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಆರೋಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಮಧ್ಯೆ ನನ್ನ ಮಗ ಮಾಡಿರುವುದು ಕ್ಷಮಿಸಲಾರದಂತ ಹೀನ ಕೃತ್ಯ ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆರೋಪಿ ಫಯಾಜ್ ತಂದೆ ಕಣ್ಣೀರು ಹಾಕಿದ್ದಾರೆ.
ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಹೆಣ್ಣು ಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು, ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ. ಅವರ ಹೋರಾಟಕ್ಕೆ ಜಯವಾಗಲಿ. ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುವಂತೆ ಕಣ್ಣೀರಾಕುತ್ತಲೇ ಮನವಿ ಮಾಡಿದ ಬಾಬಾ ಸಾಹೇಬ್, ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ. ಮುಂದೆ ಯಾವ ಹೆಣ್ಮಕ್ಕಳ ಮೇಲೆ ಯಾರೂ ಕೈ ಮಾಡಬಾರದು. ಇವನಿಗೆ ಕೊಡುವ ಶಿಕ್ಷೆಯಿಂದ ಅಂತಹ ಭಯ ಜನರಲ್ಲಿ ಮೂಡಬೇಕು. ಆ ರೀತಿಯ ಶಿಕ್ಷೆಯನ್ನು ನೀಡಲಿ. ದಯವಿಟ್ಟು ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ನನ್ನನ್ನು ಕ್ಷಮಿಸಬೇಕು ಎಂದು ಕೈ ಮುಗಿದು ಅಂಗಲಾಚಿದ್ದಾರೆ.
ಎರಡು ವರ್ಷದಿಂದ ಮಗ ನಮ್ಮ ಬಳಿ ಇರಲಿಲ್ಲ. ಹೆಚ್ಚಿನ ಶಿಕ್ಷಣಕ್ಕಾಗಿ ನಗರ ಪ್ರದೇಶಕ್ಕೆ ಹೋಗಿದ್ದನು. ತಪ್ಪು ಮಾಡಿದ್ದಲ್ಲಿ ಖಂಡಿತ ಪ್ರತಿಭಟನೆ ಮಾಡಬೇಕು. ನ್ಯಾಯಕ್ಕಾಗಿ ಪ್ರತಿಭಟನೆ ನಡೆಸೋದು ತಪ್ಪಲ್ಲ. ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು. ಅವಳು ನನ್ನ ಮಗಳಿದ್ದ ಹಾಗೆ. ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಂ ಎಂದರು.
ಇನ್ನೂ ಈ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಫಯಾಜ್ನನ್ನು (23) ಬಂಧಿಸಿದ್ದು, ಇದೀಗ ನೇಹಾ ಕೊಲೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೇ ಆರೋಪಿ ಫಯಾಜ್ನನ್ನು ಗಲ್ಲೇರಿಸಬೇಕೆಂದು ಆಗ್ರಹಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಆರೋಪಿಯನ್ನು ಎನ್ಕೌಂಟರ್ ಮಾಡಿಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.










