ಕುಡಿದ ಮತ್ತಲ್ಲಿ ಕಾರು ಚಾಲನೆ- ಹಿಟ್ ಅಂಡ್ ರನ್‌ಗೆ ಡೆಲೆವೆರಿ ಬಾಯ್ ಬಲಿ…

61
firstsuddi

ಬೆಂಗಳೂರು: ನಗರದಲ್ಲಿ ಹಿಟ್ ಅಂಡ್ ರನ್‌ಗೆ ಬೈಕ್ ಸವಾರ ಬಲಿಯಾಗಿರುವ ಘಟನೆ ಆರ್.ಆರ್. ನಗರದ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

ಹೆಚ್‌ಡಿ ಕೋಟೆ ಮೂಲದ ಪ್ರಸನ್ನಕುಮಾರ ಮೃತ ದುರ್ದೈವಿ. ಅಂಜನಾನಗರದ ಸ್ವಾತಿ ರೆಸ್ಟೋರೆಂಟ್ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು.

ಆರೋಪಿ ಕಾರು ಚಾಲಕ ವಿನಾಯಕ್ ವಿಜಯನಗರ ನಿವಾಸಿಯಾಗಿದ್ದು, ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ರಾಜಾಜಿನಗರದ ಮಹೀಂದ್ರ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾನೆ. ವೀಕೆಂಡ್ ಹಿನ್ನೆಲೆ ಇನ್ಸೆಂಟಿವ್ ಹಣದಲ್ಲಿ ನಿನ್ನೆ ರಾತ್ರಿ ಗೆಳೆಯರ ಜೊತೆ ಪಾರ್ಟಿ ಮಾಡಿದ್ದಾನೆ.

ಪಾರ್ಟಿ ಬಳಿಕ ಮದ್ಯಪಾನದ ಅಮಲಿನಲ್ಲೇ ಅಜಾಗರೂಕತೆಯಿಂದ ಕಾರಿನಲ್ಲಿ ಬಂದಿದ್ದಾರೆ. ಗೆಳೆಯ ಸಾಗರ್ ಎಂಬವನಿಗೆ ಡ್ರಾಪ್ ನೀಡಲು ಕಾರಿನಲ್ಲಿ ಮೂವರು ಯುವತಿರು, ಓರ್ವ ಯುವಕ ನಾಯಂಡಹಳ್ಳಿಯಿಂದ ಆರ್​.ಆರ್. ​ನಗರದ ಕಡೆಗೆ ತೆರಳಿದ್ದಾರೆ. ವಿನಾಯಕ್ ಕುಡಿದ ಮತ್ತಿನಲ್ಲೇ ಕಾರು ಚಲಾಯಿಸುತ್ತಿದ್ದು, ಆರ್.ಆರ್. ನಗರದ ಮೆಟ್ರೋ ನಿಲ್ದಾಣದ ಬಳಿ ಮುಂದೆ ಹೋಗುತ್ತಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಪವನ್ ​ಬೈಕ್​​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ಹೊಡೆದ ಬಳಿಕ ಕಾರನ್ನು ನಿಲ್ಲಿಸದೇ ಪ್ರಸನ್ನಕುಮಾರನ ದೇಹವನ್ನು ಸುಮಾರು 100 ಮೀಟರ್ ದೂರ ಎಳೆದೊಯ್ದಿದ್ದಾರೆ. ನಂತರ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು ಸುಮಾರು 1 ಕಿ.ಮೀ.ವರೆಗೂ ಕಾರನ್ನು ಚೇಸ್ ಮಾಡಿದ್ದಾರೆ. ನಂತರ ಕಾರನ್ನು ಅಡ್ಡ ಹಾಕಿ ಆರೋಪಿ ಚಾಲಕ ವಿನಾಯಕ್ ನನ್ನು ಹಿಡಿದು ಸ್ಥಳೀಯರು ಥಳಿಸಿದ್ದಾರೆ. ಕಾರಿನ ಗ್ಲಾಸ್ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಮೂವರು ಯುವತಿಯರು, ಯುವಕ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು ಆರೋಪಿ ವಿನಾಯಕ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತಪಾಸಣೆ ವೇಳೆ ವಿನಾಯಕ್ ಮದ್ಯಪಾನ ಮಾಡಿರುವುದು ದೃಢವಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.