ಕಲಬುರಗಿ: ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದ ಬಳಿ ಪೋಚಾವರಂದಲ್ಲಿ ನಡೆದಿದೆ.
ಮೃತರನ್ನು ಚಿಂಚೋಳಿಯ ಕುಂಚಾವರಂನ ಹಣಮಂತ(40), ಅಕ್ಷರಾ(6) ಹಾಗೂ ಓಂಕಾರ(9) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಹಣಮಂತ, ಪತ್ನಿ ಹಾಗೂ ಮಕ್ಕಳೊಂದಿಗೆ ಹೈದ್ರಾಬಾದ್ನಲ್ಲಿ ವಾಸಿಸುತ್ತಿದ್ದ. ಒಂದು ವಾರದ ಹಿಂದಷ್ಟೆ ಪತಿ ಹಾಗೂ ಪತ್ನಿ ನಡುವೆ ಗಲಾಟೆ ನಡೆದು ಕುಂಚಾವರಂಗೆ ಬಂದಿದ್ದರು. ಅಲ್ಲದೇ ಈ ವಿಚಾರವಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಳು. ಬಳಿಕ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ದಿ ಹೇಳಿ ಕಳಿಸಿದ್ದರು. ನಂತರ ಮತ್ತೆ ವಾಪಾಸ್ ಹೈದ್ರಾಬಾದ್ಗೆ ತೆರಳಿದ್ದರು.
ಹಣಮಂತ ಶನಿವಾರ ಮಕ್ಕಳೊಂದಿಗೆ ಸ್ವಗ್ರಾಮಕ್ಕೆ ಬಂದಿದ್ದ. ನಿನ್ನೆ ತಂದೆ ಮತ್ತು ಮಕ್ಕಳ ಶವ ಬಾವಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಶವ ಸಿಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










