ಡಾ. ಎಂ.ಎಸ್. ಮಣಿ
ಇರಲಿ, ನ್ಯೂಯಾರ್ಕ್ನಲ್ಲಿ ಸೋಂಕು ಹರಡಲು ಕ್ಷೌರದಂಗಡಿಯೇ ಕಾರಣವಾಗಿತ್ತು. ಇದರಿಂದಾಗಿಯೇ ಲಾಕ್ಡೌನ್ನ ನಾಲ್ಕನೇ ಹಂತದಲ್ಲಿ ಕಡ್ಡಾಯವಾಗಿ ಸ್ಯಾನಿಟೈಜರ್ ಸಿಂಪಡಿಸಲು ಸೂಚಿಸಲಾಗಿತ್ತು. ಕ್ಷೌರಿಕರು ಕಡ್ಡಾಯವಾಗಿ ಮಾಸ್ಕ್, ಫೇಸ್ ಶೀಲ್ಡ್ಗಳನನ್ನು ಧರಿಸಬೇಕೆಂದು ಹೇಳಲಾಗಿತ್ತು. ವಿಶೇಷವಾಗಿ ಪಿ.ಪಿ.ಇ. ಕಿಟ್ಗಳನ್ನು ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕೆಂದು ನಿಬಂಧನೆ ವಿಧಿಸಲಾಗಿತ್ತು. ಅಲ್ಲದೆ ರೊಟೇಷನ್ ಆಧಾರದ ಮೇಲೆ ಅಂಗಡಿಗಳನ್ನು ತೆರೆಯಬೇಕೆಂದು ಮತ್ತು ಉಪಕರಣಗಳನ್ನು ಕ್ರಿಮಿನಾಶಕ ಬಳಸಿ ಉಪಯೋಗಿಸಬೇಕೆಂದು ಸ್ಪಷ್ಟಪಡಿಸಲಾಗಿತ್ತು. ಎ.ಸಿ. ಮತ್ತು ಏರ್ ಫಿಲ್ಟರ್ಗಳನ್ನು ಬಳಸಲು ನಿರ್ಬಂಧವನ್ನು ಹೇರಲಾಗಿತ್ತು. ನೆರೆಯ ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಲಾಕ್ಡೌನ್ ನಡುವೆಯೂ ಕ್ಷೌರಿಕರಿಗೆ ಕಾರ್ಯನಿರ್ವಹಿಸಲು ನಿರ್ಬಂಧಿಸಿರಲಿಲ್ಲ. ನೋಂದಣಿ ಮಾಡಿಕೊಂಡ ಪ್ರತಿಯೊಬ್ಬ ಕ್ಷೌರಿಕರಿಗೂ ಅಲ್ಲಿನ ಸರ್ಕಾರ 2 ಸಾವಿರ ರೂ.ಗಳ ಆರ್ಥಿಕ ನೆರವನ್ನು ಕೂಡ ನೀಡಿದೆ. ಇದನ್ನು ತಮಿಳುನಾಡು ಕ್ಷೌರಿಕ ಕಲ್ಯಾಣ ಮಂಡಳಿ ಅಚ್ಚುಕಟ್ಟಾಗಿ ನಿರ್ವಹಿಸಿದೆ.
ಆದರೆ, ರಾಜ್ಯದ ಕ್ಷೌರಿಕರ ಜೀವನ ಅತ್ಯಂತ ದುರ್ಬರವಾಗಿದೆ. ಜನ ಕ್ಷೌರದಂಗಡಿಗಳಿಗೆ ತೆರಳಲು ಭಯಭೀತಗೊಂಡಿದ್ದಾರೆ. ಕ್ಷೌರದಂಗಡಿಗಳೆಲ್ಲವೂ ಭಣಗುಡುತ್ತಿವೆ.
ಏಪ್ರಿಲ್ನಲ್ಲಿ ಹೆಗ್ಡೆನಗರ ರಸ್ತೆಯ ಕ್ಷೌರಿಕನೊಬ್ಬನಿಗೆ ಕೊರೋನಾ ಸೋಂಕು ತಗಲಿತೆಂಬ ಸುದ್ದಿಯಿಂದ ಜನ ಭಯಭೀತಗೊಂಡಿದ್ದರು. ಕಾರಣ, ಕ್ಷೌರದಂಗಡಿಗೆ ಬಹಳಷ್ಟು ಜನ ಬಂದು ಕ್ಷೌರ ಮಾಡಿಸಿಕೊಂಡು ಹೋಗಿದ್ದರು. ಇದು ಸ್ಥಳೀಯರಿಗೆ ಬಹಳ ದೊಡ್ಡ ಸಮಸ್ಯೆಯಾಗಿ ಕಾಡಿತು. ಕ್ಷೌರ ಮಾಡಿಸಿಕೊಂಡವರನ್ನೆಲ್ಲ ಹುಡುಕಿ ಕ್ವಾರೆಂಟೈನ್ಗೆ ಹಾಕಬೇಕಿತ್ತು. ಎಲ್ಲಿ ಯಾರು? ಎಂದು ಹುಡುಕಿತರಲು ಸಾಧ್ಯ.
ಕಲ್ಕೆರೆಯ ಕ್ಷೌರದಂಗಡಿಯಲ್ಲಿ ಕೊರೋನಾ ಸೋಂಕಿತನೊಬ್ಬ ಕ್ಷೌರ ಮಾಡಿಸಿಕೊಂಡನೆಂಬ ಪುಕಾರು ಎದ್ದಿತ್ತು. ಕ್ಷೌರದಂಗಡಿಯ ಎಲ್ಲರೂ ಎರಡೆರಡು ಬಾರಿ ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗಬೇಕಾಯಿತು. ಇವರೆಲ್ಲರದ್ದು ನೆಗೆಟಿವ್ ವರದಿ ಬಂದಿದ್ದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು.
ಹೀಗಾಗಿಯೇ ಜನ ಕ್ಷೌರದಂಗಡಿಗಳಿಗೆ ಹೋಗಲು ಹೆದರುತ್ತಿದ್ದಾರೆ. ಬಹಳಷ್ಟು ಜನ ಮನೆಯಲ್ಲಿರುವ ಕತ್ತರಿ ತೆಗೆದುಕೊಂಡು ಸ್ವತಃ ತಾವೇ ಕ್ಷೌರಿಕರಾಗಿ ಬಿಟ್ಟಿದ್ದಾರೆ. ಬಹುತೇಕ ತಂದೆ-ಅಜ್ಜನಿಗೆ, ಮಕ್ಕಳು-ತಂದೆಗೆ ಕ್ಷೌರ ಮಾಡಿದ್ದಾರೆ. ಪತ್ನಿ-ಪತಿಗೆ ಕ್ಷೌರ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.
ಇನ್ನೂ ಗಡ್ಡ ಕೆರೆದುಕೊಳ್ಳಲು ಬಾರದ ಹಲವರು ಗಡ್ಡಧಾರಿಗಳಾಗಿದ್ದಾರೆ. ತಲೆ ಚೌರ ಮಾಡಿಸಿಕೊಳ್ಳದ ಅನೇಕರು ಮಹಿಳೆಯರಂತೆ ಜುಟ್ಟು ಬಿಟ್ಟುಕೊಂಡು ತಿರುಗಾಡುತ್ತಲೂ ಇದ್ದಾರೆ.
ಇವತ್ತು ಲಾಕ್ಡೌನ್ ತೆರವಾಗಿದೆ. ಶಾಲಾ, ಕಾಲೇಜು, ಚಿತ್ರಮಂದಿರ ಹೊರತುಪಡಿಸಿ ಉಳಿದೆಲ್ಲವೂ ಭಾಗಶಃ ಮುಕ್ತವಾಗಿವೆ. ಆದರೂ ಕ್ಷೌರದಂಗಡಿಗಳ ಕಡೆ ಹೆಜ್ಜೆ ಹಾಕುತ್ತಿಲ್ಲ. ಕ್ಷೌರ ಮಾಡುವವರು ಕೂಡ ಸೋಂಕು ಪೀಡಿತರಲ್ಲವೆಂದು ತಪಾಸಣೆ ಮಾಡಿಸಿಕೊಂಡು ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಾಗಿದೆ. ಹಾಗೆಯೇ ಕ್ಷೌರದಂಗಡಿಗೆ ಬರುವ ಗ್ರಾಹಕರನ್ನು ಕೂಡ ಶೋಧನೆಗೊಳಪಡಿಸಬೇಕು. ಇಲ್ಲವಾದಲ್ಲಿ ಸೋಂಕು ಕ್ಷೌರಿಕರಿಗೆ ಅಂಟಿಕೊಂಡು `ಸಮುದಾಯ ಹರಡುವಿಕೆ’ಗೆ ಕಾರಣವಾಗುತ್ತದೆ. ಕ್ಷೌರ ಮಾಡಿಸಿಕೊಳ್ಳಲು ಆಗಮಿಸುವ ಪ್ರತಿಯೊಬ್ಬರ ಹೆಸರು, ವಿಳಾಸ, ಮೊಬೈಲ್ ನಂಬರ್ಗಳನ್ನು ದಾಖಲಿಸಿಕೊಂಡಾಗ ಮಾತ್ರ ಆಗಬಹುದಾದ ಹಾನಿಯನ್ನು ಸರಿಪಡಿಸಲು ಸಾಧ್ಯ.
ಜಗತ್ತು ಕೊರೋನಾ ಸೋಂಕಿಗೆ ತತ್ತರಿಸುತ್ತಿರುವ ಘಳಿಗೆಯಲ್ಲಿ, ಕ್ಷೌರ ಮಾಡಿಸಿಕೊಂಡು ಸುಂದರವಾಗಿ ಕಾಣುವುದು ಮುಖ್ಯವಲ್ಲ ಎಂದು ವಾದಿಸುವವರು ಇದ್ದಾರೆ. ಹಾಗಾದರೆ ಉದ್ದುದ್ದ ಕೇಶಗಳನ್ನು ಬೆಳೆಸಿಕೊಂಡು, ಭರಿಸಲಾಗದೆ ಹೊತ್ತುಕೊಂಡು ತಿರುಗಾಡಲು ಸಾಧ್ಯವೇ? ತಲೆ ಚರ್ಮದ ಸಮಸ್ಯೆ ಹೊಂದಿರುವ ಜನ ಕ್ಷೌರ ಮಾಡಿಸಿಕೊಳ್ಳದೆ ಹೇಗೆ ಇರಲು ಸಾಧ್ಯ. ಇಂತಹ ಬಹಳ ಜನ ಕತ್ತರಿ, ಟ್ರಿಮ್ಮರ್ಗಳನನ್ನು ಬಳಸಿಕೊಂಡು ತಾವೇ ಕ್ಷೌರ ಮಾಡಿಸಿಕೊಳ್ಳುವ ಸಾಹಸವನ್ನು ಮಾಡಿದ್ದಾರೆ.
ಕ್ಷೌರಿಕರಲ್ಲದೆ ಹಲವರು ಕಡಿಮೆ ಆದಾಯದಿಂದ ಜೀವನೋಪಾಯಕ್ಕೆ ಕಷ್ಟಕರ ಎಂದೆಣಿಸಿ ತಮ್ಮ ವೃತ್ತಿಗಳನ್ನು ತೊರೆದಿದ್ದಾರೆ. ಧವಸ-ಧಾನ್ಯ ಬೆಳೆಯುತ್ತಿದ್ದ ರೈತ ಕೂಡ ಬೆಳೆಯುವುದನ್ನು ಮರೆತಿದ್ದಾನೆ. ವರ್ಷಕ್ಕಾಗುವಷ್ಟು ಅಕ್ಕಿ, ರಾಗಿ ಬೆಳೆಯುತ್ತಿದ್ದ ರೈತ, ರೇಷನ್ ಅಂಗಡಿ ಬಳಿ ಚೀಲ ಹಿಡಿದು ಅಕ್ಕಿಗಾಗಿ ಕಾದು ನಿಂತಿರುತ್ತಾನೆ. ಇದರಿಂದಲೂ ಕ್ಷೌರಿಕರು, ಕಮ್ಮಾರರು, ಮಡಿವಾಳರು, ಉಪ್ಪಾರರು, ಕುರಿಗಾರರು, ಕಂಬಳಿ ನೇಕಾರರು ತಮ್ಮ ಕುಲಕಸುಬನ್ನು ತೊರೆದಿದ್ದಾರೆ.
ಅಲ್ಲದೆ, ಸಾಮಾಜಿಕವಾಗಿ ಅವಮಾನಿತಗೊಂಡು, ಹಿಯ್ಯಾಳಿಕೆಗಳನ್ನು ಸಹಿಸಲಾಗದೆ ಹಲವರು ವೃತ್ತಿ ಬಿಟ್ಟಿದ್ದಾರೆ. ಅನ್ಯವೃತ್ತಿಯ ಆದಾಯದೆಡೆಗೆ ಆಕರ್ಷಿತಗೊಂಡು ವೃತ್ತಿ ತ್ಯಜಿಸಿದವರು ಇದ್ದಾರೆ. ಕೊರೋನಾ ಸೋಂಕು ಹಳ್ಳಿಗಾಡನ್ನು ತ್ಯಜಿಸಿದ್ದ ಹಲವರನ್ನು ಮತ್ತೆ ಹಳ್ಳಿಗೆ ಸಾಗಹಾಕಿದೆ. ಹೀಗಾಗಿ ಇವರುಗಳೆಲ್ಲರೂ ಕ್ಷೌರಿಕರ ಮೇಲೆ ಅವಲಂಬಿತರಾಗಬೇಕಾದ್ದರಿಂದ ಹೊಸ ಚಿಗುರು ಮೂಡಿಸಿದೆ.
ಇದರ ನಡುವೆ ಸಂಪರ್ಕ, ಸಂವಹನ ಬಲದಿಂದ ಜಯನಗರದ ಕಾಳಪ್ಪ ಅವರರಂತಹ ಅನೇಕರು ತಮ್ಮ ವೃತ್ತಿಯನ್ನು ಮುಖ್ಯಭೂಮಿಕೆಯಿಂದ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಬೆಳವಣಿಗೆಯಿಂದಲೂ ಸಂಪ್ರದಾಯಿಕ ಕ್ಷೌರಿಕರು ತಮ್ಮ ಮಾರುಕಟ್ಟೆ ಕಳೆದುಕೊಂಡಿದ್ದಾರೆ.
ಕ್ಷೌರದಂಗಡಿಗಳು ಅಂದಿಗೂ, ಇಂದಿಗೂ ಅದೊಂದು ಸಾಮಾಜಿಕ ತಾಣ. ಅಲ್ಲಿ ಎಲ್ಲಾ ವರ್ಗದವರು ಸೇರುತ್ತಾರೆ. ಹೀಗಾಗಿ ಅಲ್ಲಿ ಚರ್ಚೆ, ಸಂವಾದ, ಮಾಹಿತಿ ಪ್ರಸರಣ ನಡೆಯುತ್ತದೆ. ಜನಪ್ರತಿನಿಧಿಗಳು ಮಾತ್ರವಲ್ಲದೆ, ಮತದಾನೋತ್ತರ ಸಮೀಕ್ಷೆ ನಡೆಸುವ ಸಂಸ್ಥೆಗಳು ಕೂಡ ಜನರ ನಾಡಿಮಿಡಿತ ಅರಿಯಲು ಕ್ಷೌರದಂಗಡಿಗಳ ಮೇಲೆ ಅವಲಂಬಿತರಾಗಿದ್ದಾರೆ.
ಶಿಮ್ಲಾದಲ್ಲಿ ಗಂಗ್ ಬಜಾರ್ ಎಂಬುದಿದೆ. ಹಿಂದೆ ಇದನ್ನು `ಎಡ್ವರ್ಡ್ಗಂಜ್’ ಎಂದು ಕರೆಯಲಾಗುತ್ತಿತ್ತು. 1948ರಲ್ಲಿ ವಿಲಿಯಂ ಎಡ್ವರ್ಡ್ ಎಂಬ ಬ್ರಿಟಿಷ್ ಅಧಿಕಾರಿ ಕ್ಷೌರಿಕರ ಕೌಶಲ್ಯಕ್ಕೆ ಮನಸೋತು `ಎಡ್ವರ್ಡ್ಗಂಜ್’ನ್ನು ನಿರ್ಮಿಸಿಕೊಟ್ಟಿದ್ದರು. ವಿಲಿಯಂ ಎಡ್ವರ್ಡ್ ಓರ್ವ ಸುಧಾರಣಾವಾದಿಯಾಗಿದ್ದರು. ಇಲ್ಲಿರುವ ಕ್ಷೌರದ ಅಂಗಡಿಗಳು `ಕ್ಷೌರದ ಕಾರ್ಖಾನೆ’ ಎಂಬ ಖ್ಯಾತಿಯನ್ನು ಗಳಿಸಿವೆ. ಇದಕ್ಕೆ 70 ವರ್ಷಗಳು ದಾಟಿದ್ದರೂ, ಇನ್ನೂ ಗಟ್ಟುಮುಟ್ಟಾಗಿವೆ. ಇಲ್ಲಿರುವ ಕ್ಷೌರದ ಅಂಗಡಿಯಲ್ಲಿ ನಮ್ಮ ರಾಜ್ಯದ ಕ್ಷೌರಿಕರು ಇದ್ದಾರೆ. ಇವರ ಪೂರ್ವಜರು ಬಹಳ ಹಿಂದೆಯೇ ಅಲ್ಲಿ ನೆಲೆಸಿ, ಸ್ಥಳೀಕರಾಗಿದ್ದಾರೆ. ಆದರೂ ಇವರುಗಳ ಜೀವನಶೈಲಿ ಉತ್ತಮವಾಗಿಲ್ಲ. ಗರಿ ಹೆಣೆದ ಗುಡಿಸಲು ಮನೆಗಳಲ್ಲಿಯೇ ನೆಲೆಸಿದ್ದಾರೆ. ಇದರ ನಡುವೆ ನೆರೆಯ ತಮಿಳುನಾಡಿನ ಮಧುರೈನ ಕ್ಷೌರಿಕ ಸಿ. ಮೋಹನ್ ಅವರ ಪುತ್ರಿ ಎಂ. ನೇತ್ರಾ ವಿಶ್ವಸಂಸ್ಥೆಯ `ಸದ್ಭಾವನಾ ರಾಯಭಾರಿ’ಯಾಗಿ ನೇಮಕಗೊಂಡಿದ್ದಾಳೆ. ಇದು ನನ್ನಂತಹ ಅನೇಕರಲ್ಲಿ ಭರವಸೆಯ ಬೆಳಕು ಮೂಡಿಸಿದೆ.
ವಿಲಿಯಂ ಎಡ್ವರ್ಡ್ನಂತೆಯೇ ಮಧ್ಯಪ್ರದೇಶದ ಸಚಿವ ವಿಜಯ್ಶಾ ಕ್ಷೌರಿಕ ರೋಹಿದಾಸ್ ಕೌಶಲ್ಯಕ್ಕೆ ಮನಸೋತು ಹೊಸ ಅಂಗಡಿ ತೆರೆಯಲು 60 ಸಾವಿರಗಳ ನೆರವು ನೀಡಿದ್ದಾರೆ. ವಂಶಪಾರಂಪರ್ಯವಾಗಿ ಬಂದ ಕೇಶವಿನ್ಯಾಸ ಮಾತ್ರವಲ್ಲದೆ, ಸಮಾಜದ ಒಳಿತಿಗಾಗಿ ಪ್ರಾರ್ಥಿಸುವ, ಪೂಜಿಸುವ, ವಿಸ್ವಾಸಾರ್ಹ ಸಮುದಾಯ ಕೊರೋನಾ ಸೋಂಕಿನ ಭೀತಿಗೆ ಸಿಲುಕಿ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತಲಿದೆ.
ಇದು ನಿಜವಾದರೂ, ಭೂಮಿಯ ಮೇಲಿರುವ ಪ್ರತಿಯೊಬ್ಬರು ಕ್ಷೌರಿಕರೇ ಆಗಿರುವರು. ಕ್ಷೌರದಂಗಡಿಯಲ್ಲಿ ಮುಖಸೌಂದರ್ಯಕ್ಕಾಗಿ ಕ್ಷೌರ ಮಾಡಲಾಗುತ್ತದೆ. ದೇಹದ ಇತರೆ ಭಾಗಗಳಲ್ಲಿ ಬೆಳೆಯುವ ರೋಮಗಳನ್ನು ನಾವೇ ಸ್ವತಃ ಕ್ಷೌರ ಮಾಡುವುದರಿಂದ ನಾವುಗಳೆಲ್ಲರೂ ಕ್ಷೌರಿಕರೇ ಆಗಿದ್ದೇವೆ.
ಏನಾಗುತ್ತಿದೆ, ಎತ್ತ ಸಾಗುತ್ತಿದ್ದೇವೆ? ಎಂಬ ಚಿಂತೆ ಕಾಡುತ್ತಿದೆ. ನಮ್ಮ ಜೀವನ ವಿಧಾನವನ್ನು ಮಾಧ್ಯಮಗಳು ನಿರ್ದೇಶಿಸುವ ಹಂತಕ್ಕೆ ತಲುಪಿಬಿಟ್ಟಿದ್ದೇವೆ. ನಮ್ಮ ಬದುಕಿಂದು ಮಿಂಚಿನ ಸುದ್ದಿಗೆ ಸಿಲುಕಿಕೊಂಡುಬಿಟ್ಟಿದೆ. ಕೊರೋನಾ ಭಾದಿತನೆಂದು ಮಕ್ಕಳೆಲ್ಲರೂ ಕೂಡಿ ತಮ್ಮ ತಂದೆಯ ದೇಹವನ್ನು ಚಿತೆಗೆ ಒಪ್ಪಿಸಲು ಮುಂದೆ ಬರಲಿಲ್ಲವೆಂಬ ಸುದ್ದಿ ಓದಿ ಬಹಳ ದುಃಖವಾಯಿತು.
ನನಗಿಲ್ಲಿ ಎರಡು ದೃಶ್ಯಗಳು ಒಂದೇತೆರನಾಗಿ ಕಂಡಿದೆ. ಒಂದು ಕ್ಷೌರಿಕರ ಅಂಗಡಿ; ಮತ್ತೊಂದು ಮಸಣ. ಅಲ್ಲಿಯೂ ಮೌನಭೀತಿ, ಇಲ್ಲಿಯೂ ಮೌನದ ಭೀತಿ.










