ಕೆಂಪುಕೋಟೆ ಮೇಲೆ ದಾಳಿ ; ಉಗ್ರ ಅಶ್ಫಾಕ್ ಆರಿಫ್ ಗಲ್ಲು ಶಿಕ್ಷೆ ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ.

54
firstsuddi

ನವದೆಹಲಿ : 2000 ಇಸವಿಯಲ್ಲಿ ದೆಹಲಿಯ ಕೆಂಪುಕೋಟೆ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಮೊಹಮ್ಮದ್ ಅಶ್ಫಾಕ್ ಆರಿಫ್ ತನಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿದ್ದನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಯು.ಯು. ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು, ಈ ಅಪರಾಧ ಬಗ್ಗೆ ಎಲ್ಲ ಸಾಕ್ಷಿಗಳು ಸಾಬೀತಾಗಿದ್ದು ಮರುಪರಿಶೀಲನೆ ಮಾಡುವ ಅಗತ್ಯವಿಲ್ಲ. ಈ ಅರ್ಜಿಯನ್ನು ನಾವು ತಿರಸ್ಕರಿಸುತ್ತಿದ್ದೇವೆ ಎಂದು ಹೇಳಿದೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷರ್-ಎ-ತೊಯ್ಬಾ ಉಗ್ರ ಮೊಹಮ್ಮದ್ ಆರಿಫ್ ಗೆ ಗಲ್ಲುಶಿಕ್ಷೆ ಖಾಯಂ ಆದಂತಾಗಿದೆ.

2000 ಇಸವಿಯ ಡಿಸೆಂಬರ್ 22ರ ರಾತ್ರಿ ಉಗ್ರರು ಕೆಂಪು ಕೋಟೆಯನ್ನು ಪ್ರವೇಶಿಸಿ ಸೇನಾ ಪೂರೈಕೆ ಡಿಪೋ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಸೈನಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ದಾಳಿಯ ಮಾಸ್ಟರ್ ಮೈಂಡ್ ಅಪರಾಧಿಯಾಗಿರುವ ಪಾಕಿಸ್ತಾನಿ ವ್ಯಕ್ತಿ ಅಶ್ಫಾಕ್ ಆರಿಫ್ ಗೆ 2005ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿತ್ತು. ದೆಹಲಿ ಹೈಕೋರ್ಟ್ 2007ರಲ್ಲಿ, 2011ರಲ್ಲಿ ಸುಪ್ರೀಂಕೋರ್ಟ್ ಕೆಳ ನ್ಯಾಯಲಯದ ಆದೇಶವನ್ನು ಎತ್ತಿಹಿಡಿದಿತ್ತು.

ಜನವರಿ 2014ರಲ್ಲಿ ಮರುಪರಿಶೀಲನೆ ಅರ್ಜಿಗಳನ್ನು ವಜಾಗೊಳಿಸಲಾಗಿತ್ತು. ಆದಾಗ್ಯೂ, 2016ರಲ್ಲಿ ಸುಪ್ರೀಂಕೋರ್ಟ್ ಆರಿಫ್ ಗೆ ಮರಣದಂಡನೆಯ ವಿರುದ್ಧ ಹೋರಾಡಲು ಮತ್ತೊಂದು ಅವಕಾಶವನ್ನು ನೀಡಿತ್ತು. ಸೆಪ್ಟೆಂಬರ್ 2014ರ ಸಾಂವಿಧಾನಿಕ ಪೀಠವು ಶಿಕ್ಷೆಗೊಳಗಾದ ಕೈದಿಗಳ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ಅನುಮತಿ ನೀಡಿತ್ತು.