ಗದಗ: ಕೆಎಸ್ಆರ್ಟಿಸಿ ಬಸ್ ಹಾಗೂ ಟಾಟಾ ಸುಮೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಬಳಿ ನಡೆದಿದೆ.
ಮೃತರನ್ನು ಮಾದೇನ ಹಿಪ್ಪರಗಿ ನಿವಾಸಿಗಳಾದ ಶಿವಕುಮಾರ ಕಲಶೆಟ್ಟಿ(50), ಚಂದ್ರಕಲಾ ಕಲಶೆಟ್ಟಿ(42), ರಾಣಿ ಕಲಶೆಟ್ಟಿ(32) ಹಾಗೂ ಅಫಜಲಪುರ ನಿವಾಸಿಗಳಾದ ಸಚಿನ್ ಅಬ್ಬಾಸ್ ಕತ್ತಿ (31), ದ್ರಾಕ್ಷಾಯಣಿ ಕತ್ತಿ(33) ಮೃತರು ಎಂದು ಗುರುತಿಸಲಾಗಿದೆ.
ಕಲಬುರಗಿಯಿಂದ ಶಿರಹಟ್ಟಿ ಫಕ್ಕೀರೇಶ್ವರ ಮಠದ ದರ್ಶನಕ್ಕೆ ತೆರಳುತ್ತಿದ್ದ ಟಾಟಾ ಸುಮೋ ವಾಹನದ ಹಿಂಬದಿಯ ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಸುಮೋ ವಾಹನದಲ್ಲಿದ್ದ ಐದು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನರೇಗಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










