ಶ್ರೀರಂಗರಾಮ ಆರ್ಟ್ ಫೌಂಡೇಶನ್‍ನಿಂದ ನಡೆದ ನೃತ್ಯ ಚಿಲುಮೆ ಕಾರ್ಯಕ್ರಮ…

61
firstsuddi

ಚಿಕ್ಕಮಗಳೂರು: ಶ್ರೀರಂಗರಾಮ ಆರ್ಟ್ ಫೌಂಡೇಶನ್‍ನಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ನೃತ್ಯ ಚಿಲುಮೆ ಕಾರ್ಯಕ್ರಮ ಶಾಸ್ತ್ರೀಯ, ಸಾಂಪ್ರದಾಯಿಕ ನೃತ್ಯಗಳಾದ ಭರತನಾಟ್ಯ, ಕೂಚಿಪುಡಿ ಮತ್ತು ಕಥಕ್‍ನ ವೈಭವವನ್ನು ಅನಾವರಣಗೊಳಿಸಿತು.

ಖ್ಯಾತ ಒಡಿಸ್ಸಿ ನೃತ್ಯ ಕಲಾವಿದ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರಮಟ್ಟದ ಕಲಾವಿದರಿಂದ ಎರಡು ಗಂಟೆಗೂ ಅಧಿಕ ಕಾಲ ನಡೆದ ಮೂರು ಪ್ರಾಕಾರಗಳ ನೃತ್ಯ ಪ್ರದರ್ಶನ ನೋಡುಗರಿಗೆ ಮೋಡಿ ಮಾಡಿತು.

ಅಲರಿಪುನೊಂದಿಗೆ ನಾಟ್ಯಯಾನ ಆರಂಭಿಸಿದ ಬೆಂಗಳೂರಿನ ಭರತನಾಟ್ಯ ಕಲಾವಿದೆ ಗೌರಿ ಮನೋಹರಿ, ನಂತರ ಶಿವಸ್ತುತಿ, ಪುರಂದರದಾಸರ ಕಡಗೋಲ ತಾರೆನ್ನ ಚಿನ್ನವೆ ಕೃತಿಗಳ ಮೂಲಕ ಅಮೋಘವಾಗಿ ನರ್ತಿಸಿ ನೋಡುಗರ ಮನ ಗೆದ್ದರು.

ಕಲಾವಿದೆ ಆರತಿ ನಾಯರ್ ಕೂಚಿಪುಡಿಯಲ್ಲಿ, ರಾಗ ಮಾಲಿಕೆಯಲ್ಲಿ ಪ್ರಣತಿ ನೃತ್ಯ, ಕಾಪಿ ರಾಗದ ಜಾವಳಿಯಲ್ಲಿ ಪರುಲೆನ್ನ ಮಾಟ ಮತ್ತು ತರಂಗವನ್ನು ಪ್ರಸ್ತುತಪಡಿಸಿ ತಮ್ಮ ಹಾವ ಭಾವ ಅದ್ಭುತ ಅಭಿನಯದ ಮೂಲಕ ನವರಸಗಳ ರಸದೌತಣವನ್ನು ನೋಡುಗರಿಗೆ ಉಣ ಬಡಿಸಿದರು.

ಕಥಕ್ ಶೈಲಿಯನ್ನು ಪ್ರದರ್ಶಿಸಿದ ಸೋಹಿನಿ ಕಾರಂತ್, ಜೈಜೈ ಮಹಾಕಾಳಿ ದುರ್ಗೆ ಭವಾನಿ, ಹಿಂದೋಳ ರಾಗದ ಜೈಜೈಜೈ ಶಿವಶಂಕರ್ ಕೃತಿಗಳನ್ನು ಹಾಗೂ ಚತುರನ್ ಪ್ರಸ್ತುತಪಡಿಸಿ ಹಿಂದೂಸ್ತಾನಿ ರಾಗದ ಬೋರ್ಗರೆತದೊಂದಿಗೆ ಮಿಂಚಿನ ವೇಗದಲ್ಲಿ ನರ್ತಿಸುವ ಮೂಲಕ ಸಭೆಯಲ್ಲಿ ಸಂಚಲನ ಮೂಡಿಸಿ ನೋಡುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.

ಒಂದೇ ವೇದಿಕೆಯಲ್ಲಿ ಶಾಸ್ತ್ರೀಯ ನೃತ್ಯ ಪ್ರಾಕಾರಗಳಾದ ದಕ್ಷಿಣಾದಿಯ ಭರತನಾಟ್ಯ, ಕೂಚಿಪುಡಿ ಮತ್ತು ಉತ್ತರಾದಿಯ ಕಥಕ್‍ನ ವೈಭವವನ್ನು ನೋಡುಗರು ಕಣ್ತುಂಬಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಒಡಿಸ್ಸಿ ನೃತ್ಯ ಕಲಾವಿದ ಉದಯಕುಮಾರ್ ಶೆಟ್ಟಿ, ಇಂದಿನ ಪೀಳಿಗೆ ಅಸಂಬದ್ಧವಾದ ಪಾಶ್ಚಾತ್ಯ ಅನುಕರಣೆಯನ್ನು ಬಿಟ್ಟು ಭಾರತೀಯ ಶಾಸ್ತ್ರೀಯ ಕಲೆಗಳನ್ನು ಆಸ್ವಾಧಿಸಬೇಕು ಮತ್ತು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಮಾತನಾಡಿ, ಒಂದೇ ವೇದಿಕೆಯಲ್ಲಿ ಭರತನಾಟ್ಯ, ಕೂಚಿಪುಡಿ ಮತ್ತು ಕಥಕ್ ನೃತ್ಯಗಳನ್ನು ಸಾದರಪಡಿಸಿದ ಶ್ರೀ ರಂಗರಾಮ ಆರ್ಟ್ ಫೌಂಡೇಶನ್‍ನ ಕಾರ್ಯ ಸ್ತುತ್ಯಾರ್ಹವಾದುದು ಎಂದರು.

ಶ್ರೀರಂಗರಾಮ ಆರ್ಟ್ ಫೌಂಡೇಶನ್‍ ಅಧ್ಯಕ್ಷ ಎಚ್.ಆರ್.ಸುರೇಶ್, ಕಲಾವಿದೆ ಡಾ.ಎಂ.ಎಸ್.ವಿದ್ಯಾಲಕ್ಷ್ಮಿ, ಹೆಚ್.ಎಸ್. ಕಿರಣ್, ಲಕ್ಷ್ಮೀಬಾಯಿ ಉಪಸ್ಥಿತರಿದ್ದರು.