ಕೆಜಿಎಫ್ 2 ಚಿತ್ರದ ಹಾಡು ಬಳಕೆ ಆರೋಪ – ರಾಹುಲ್ ಗಾಂಧಿಗೆ ಹೈಕೋರ್ಟ್ ನೋಟಿಸ್…

73
firstsuddi

ಬೆಂಗಳೂರು : ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಚಿತ್ರದ ಹಾಡನ್ನು ಬಳಕೆ ಮಾಡಿದ ಪ್ರಕರಣ ಸಂಬಂಧ ಎಂಆರ್ ಟಿ ಮ್ಯೂಸಿಕ್ ಸಂಸ್ಥೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ಹಿಂದೆ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹಾಡು ತೆಗೆಯುತ್ತೇವೆಂದು ಕಾಂಗ್ರೆಸ್ ಮುಚ್ಚಳಿಕೆ ನೀಡಿತ್ತು. ಆದರೆ ತನ್ನ ಎಲ್ಲ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಈ ಹಾಡನ್ನು ಇನ್ನೂ ತೆಗೆದಿಲ್ಲ. ಅಲ್ಲದೇ ಹೈಕೋರ್ಟ್ ಆದೇಶವನ್ನು ಕಾಂಗ್ರೆಸ್ ಪಾಲಿಸಿಲ್ಲ ಎಂದು ಆರೋಪಿಸಿ ಎಂಆರ್ ಟಿ ಮ್ಯೂಸಿಕ್ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮಾದ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.

ಏನಿದು ಪ್ರಕರಣ?
ಭಾರತ್ ಜೋಡೋ ಯಾತ್ರೆಯಲ್ಲಿ ‘ಕೆಜಿಎಫ್ 2’ ಚಿತ್ರದ ಹಿಂದಿ ಗೀತೆ ‘ಸುಲ್ತಾನ್..’ ಹಾಡನ್ನು ಬಳಕೆ ಮಾಡಲಾಗಿತ್ತು. ಈ ಕಾರಣಕ್ಕೆ ಈ ಹಾಡಿನ ಹಿಂದಿ ಹಕ್ಕನ್ನು ಹೊಂದಿರುವ ಎಂಆರ್ ಟಿ ಮ್ಯೂಸಿಕ್ ಸಂಸ್ಥೆಯು ರಾಹುಲ್ ಗಾಂಧಿ, ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧ ದೂರು ದಾಖಲಿಸಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.

ಕೆಜಿಎಫ್‌ ಹಾಡನ್ನು ಕಾಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಾದ ಟ್ಟಿಟ್ಟರ್‌, ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಳಸಲಾಗಿದೆ. ನಮ್ಮ ಸಂಸ್ಥೆಯ ಅನುಮತಿ ಪಡೆಯದೇ ಕಾಪಿರೈಟ್‌ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಸಂಸ್ಥೆ ಬಳಿಕ ಕೋರ್ಟ್‌ ಮೊರೆ ಹೋಗಿತ್ತು. ದೂರಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಭಾರತ್‌ ಜೋಡೋ ಯಾತ್ರೆಯ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡುವಂತೆ ಟ್ವಿಟ್ಟರ್‌ ಕಂಪನಿಗೆ ಬೆಂಗಳೂರು ನಗರ ಜಿಲ್ಲಾ ವಾಣಿಜ್ಯ ಕೋರ್ಟ್‌ ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ನ.8 ರಂದು ನ್ಯಾ. ಜಿ. ನರೇಂದರ್‌ ಮತ್ತು ನ್ಯಾ.ಪಿಎನ್‌ ದೇಸಾಯಿ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆದ ಅರ್ಜಿಯ ವಿಚಾರಣೆ ವೇಳೆ ಕಾಂಗ್ರೆಸ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ನಮ್ಮ ಪ್ರತಿವಾದಿಗಳು ಸಂಪೂರ್ಣ ಟ್ವಿಟ್ಟರ್‌ ಖಾತೆಯನ್ನು ತೆಗೆದು ಹಾಕುವಂತೆ ಕೋರಿದ್ದಾರೆ. ಆದರೆ 45 ಸೆಕೆಂಡಿನ ಆಡಿಯೋದಲ್ಲಿ ಮಾತ್ರ ಮ್ಯೂಸಿಕ್‌ ಬಳಕೆ ಮಾಡಲಾಗಿದೆ. ಮ್ಯೂಸಿಕ್‌ ಬಳಸಿ ನಾವು ತಪ್ಪು ಮಾಡಿದ್ದೇವೆ. ಕೆಜಿಎಫ್‌ ಮ್ಯೂಸಿಕ್‌ ಎಲ್ಲೆಲ್ಲಿ ಬಳಕೆ ಮಾಡಲಾಗಿದೆಯೋ ಅವೆಲ್ಲವನ್ನು ತೆಗೆದು ಹಾಕುತ್ತೇವೆ ಎಂದು ಮನವಿ ಮಾಡಿದ್ದರು. ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕೆಜಿಎಫ್‌ ಹಾಡನ್ನು ಬಳಕೆ ಮಾಡಿದ್ದ ಟ್ವೀಟ್‌ಗಳನ್ನು ತೆಗೆದು ಹಾಕಬೇಕೆಂದು ಹೈಕೋರ್ಟ್‌ ಕಾಂಗ್ರೆಸ್‌ಗೆ ಆದೇಶ ನೀಡಿ ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಗೊಳಿಸಿತ್ತು.