ನವದೆಹಲಿ: ಕೇಂದ್ರ ಸರ್ಕಾರ ರೂ.50,571 ಕೋಟಿ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ವೆಚ್ಚವನ್ನು ಹೆಚ್ಚಿಸಲು ಬಂಡವಾಳ ಹೂಡಿಕೆ ಯೋಜನೆ ಭಾಗವಾಗಿ ವಿಶೇಷ ನೆರವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಅರುಣಾಚಲ ಪ್ರದೇಶ, ಹರಿಯಾಣ, ಕೇರಳ, ಪಂಜಾಬ್ ಮತ್ತು ತೆಲಂಗಾಣ ಹೊರತುಪಡಿಸಿ 28 ರಾಜ್ಯಗಳ ಪೈಕಿ 23 ರಾಜ್ಯಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಒದಗಿಸಿದ ಬಡ್ಡಿ ರಹಿತ ಸೌಲಭ್ಯವನ್ನು ಪಡೆದುಕೊಂಡಿವೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ವಿಶೇಷ ಅನುದಾನ ಪಡೆದ ರಾಜ್ಯಗಳ ಪೈಕಿ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ರೂ. 7,007.93 ಕೋಟಿ, ಮಧ್ಯ ಪ್ರದೇಶ ರೂ. 5,074.94 ಕೋಟಿ, ಬಿಹಾರ ರೂ. 5,408.88 ಕೋಟಿ, ರಾಜಸ್ಥಾನ ರೂ. 4,552.01 ಕೋಟಿ, ಪಶ್ಚಿಮ ಬಂಗಾಳ ರೂ. 4,416.23 ಕೋಟಿ, ಅಸ್ಸಾಂ ರೂ.3.181.97 ಕೋಟಿ, ಒಡಿಶಾ ರೂ. 3,085.44 ಕೋಟಿ, ಮಹಾರಾಷ್ಟ್ರ ರೂ.2, 617.70 ಕೋಟಿ, ಆಂಧ್ರ ಪ್ರದೇಶ ರೂ. 2, 616.27 ಕೋಟಿ ಮತ್ತು ಕರ್ನಾಟಕಕ್ಕೆ ಅತಿ ಕಡಿಮೆ ರೂ. 2, 272.87 ಕೋಟಿ ಬಿಡುಗಡೆ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಬಜೆಟ್‍ನಲ್ಲಿ ರಾಜ್ಯಗಳಿಗೆ ಕೇಂದ್ರದ ‘ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವು’ ಯೋಜನೆಗೆ ರೂ.1.5 ಲಕ್ಷ ಕೋಟಿ ಹಂಚಿಕೆ ಮಾಡಿದ್ದಾರೆ. ಬಂಡವಾಳ ವೆಚ್ಚ ಹೆಚ್ಚಿಸಲು 50 ವರ್ಷ ಬಡ್ಡಿ ರಹಿತ ಸಾಲವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್, ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿನ ಬಂಡವಾಳ ಹೂಡಿಕೆ ಯೋಜನೆಗಳನ್ನುಈ ಯೋಜನೆಯಡಿ ಅನುಮೋದಿಸಲಾಗಿದೆ. ಜಲ ಜೀವನ್ ಮಿಷನ್ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಳ ರಾಜ್ಯದ ಪಾಲನ್ನು ಪೂರೈಸಲು ಹಣವನ್ನು ಒದಗಿಸಲಾಗಿದೆ.










