ಚೆನ್ನೈ : ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ನಿಧನರಾಗಿದ್ದಾರೆ.
ಮೂಲತಃ ಆಂಧ್ರಪ್ರದೇಶದವರಾಗಿರುವ ಸಾಯಿ ತೇಜ್, 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್ಗೆ ಸೇರಿದ್ದರು. ಕಳೆದ ಕೆಲ ದಿನಗಳ ಹಿಂದೆ ಇವರು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಸೇರಿಕೊಂಡಿದ್ದರು. ಮೃತ ಸಾಯಿ ತೇಜ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಮೂರು ವರ್ಷದ ಗಂಡು ಮಗು ಹಾಗೂ ಎರಡು ವರ್ಷದ ಹೆಣ್ಣು ಮಗುವಿದೆ.
ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮನೆಗೆ ಭೇಟಿ ನೀಡಿದ್ದರು. ಇತ್ತ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಸಾವನ್ನಪ್ಪಿರುವ ಮಾಹಿತಿ ತಿಳಿಯುತ್ತಿದ್ದಂತೆ ಕುರಬಾಳ ಮಂಡಲದ ಯಗುವರೆಗಡ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಪಾರ್ಥಿವ ಶರೀರ ಇಂದು ಆಂಧ್ರಪ್ರದೇಶಕ್ಕೆ ಬರಲಿದ್ದು, ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.










