ಮಡಿಕೇರಿ : ಶಾಲೆಯ ನೀರಿನ ಟ್ಯಾಂಕ್ ಗೆ ದುಷ್ಕರ್ಮಿಗಳು ವಿಷ ಬೆರೆಸಿದ ಘಟನೆ ತಾಲೂಕಿನ ಸುಂಟಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿ ಹೋಗಿದೆ.
ಶೌಚಾಲಯ ಸ್ವಚ್ಛ ಮಾಡುವ ಆಯಾ ಎಂದಿನಂತೆ ನೀರು ಬಿಟ್ಟಿದ್ದಾರೆ. ಈ ವೇಳೆ ನೀರು ಕೆಟ್ಟ ವಾಸನೆ ಬರುತ್ತಿರುವುದು ಗೊತ್ತಾಗಿದೆ. ಕೂಡಲೇ ಆಯಾ ಶಾಲೆಯ ಶಿಕ್ಷಕರಿಗೆ ತಿಳಿಸಿದ್ದಾರೆ. ಶಿಕ್ಷಕರು ಸಿಂಟೆಕ್ಸ್ ಪರಿಶೀಲಿಸಿದಾಗ ಅದರಲ್ಲಿ ಯಾವುದೋ ವಿಷ ಮಿಶ್ರಣವಾಗಿರುವುದು ಗೊತ್ತಾಗಿದೆ. ಆತಂಕಗೊಂಡ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಟ್ಯಾಂಕ್ ನೀರಿನಲ್ಲಿ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿರುವುದು ಪತ್ತೆಯಾಗಿದೆ. ಸದ್ಯ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಶಾಲೆಯ ಶಿಕ್ಷಕರು ದೂರು ನೀಡಿದ್ದು, ನೀರಿಗೆ ವಿಷ ಬೆರೆಸಿರುವ ಕ್ರಿಮಿಗಳಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.
ಈ ನೀರನ್ನು ಶೌಚಾಲಯದ ಉದ್ದೇಶಕ್ಕೆ ಮಾತ್ರ ಬಳಸಲಾಗಿದ್ದು, ಯಾವ ವಿದ್ಯಾರ್ಥಿಯೂ ಸೇವಿಸಿಲ್ಲ. ಇದರಿಂದ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 115 ವಿದ್ಯಾರ್ಥಿಗಳ ಅಪಾಯದಿಂದ ಪಾರಾಗಿದ್ದಾರೆ. ಈ ಹಿಂದೆ ಕೆಲ ಕಿಡಿಗೇಡಿಗಳು ಶಾಲೆಯ ಆವರಣದಲ್ಲಿ ಇಟ್ಟಿದ್ದ ಪುಸ್ತಕಗಳನ್ನು ಸುಟ್ಟು ಹಾಕಿದ್ದರು ಎಂದು ತಿಳಿದುಬಂದಿದೆ.










