ಬೆಂಗಳೂರು : ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ಪಾಸ್ ಮಾಡಿಸುತ್ತೇನೆ ಎಂದು ನಂಬಿಸಿ ಹಣ ಗಳಿಸುತ್ತಿದ್ದ ಆರೋಪಿಯನ್ನ ವಿಜಯನಗರ ಠಾಣೆ ಪೊಲೀಸರು ಬಂಧಿಸಲಾಗಿದೆ. ಆರೋಪಿ ಮೆಜೆಸ್ಟಿಕ್‍ನಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್ಸ್‍ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗೋವಿಂದರಾಜು ಎಂದು ತಿಳಿಸಲಾಗಿದೆ. ಮಧ್ಯವರ್ತಿಗಳ ಸಹಾಯದಿಂದ ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಆರೋಪಿ, ತನಗೆ ಪರೀಕ್ಷೆಗೆ ಸಂಬಂಧಿಸಿದಂತಹ ಕೆಲ ಅಧಿಕಾರಿಗಳ ಪರಿಚಯವಿದ್ದು, ಪರೀಕ್ಷೆಯಲ್ಲಿ ಪಾಸ್ ಮಾಡಿಸಿ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದಾರೆ. ಅಭ್ಯರ್ಥಿಗಳಿಂದ ಪಿಡಿಒ ಹುದ್ದೆಗೆ 25 ಲಕ್ಷ ರೂಪಾಯಿ ಹಾಗೂ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಪಾಸ್ ಮಾಡಿಸಲು 50 ಲಕ್ಷ ರೂಪಾಯಿಗೆ ಮಾತನಾಡಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತರ ಗೊತ್ತಾಗದ ಪ್ರಶ್ನೆಗಳನ್ನು ಖಾಲಿ ಬಿಟ್ಟು ಬರುವಂತೆ ತಿಳಿಸಿ, ನಂತರ ತಾನು ಸರಿಯಾದ ಉತ್ತರಗಳನ್ನು ತುಂಬಿಸಿ ಪಾಸ್ ಮಾಡಿಸುವುದಕ್ಕೆ ಗ್ಯಾರಂಟಿಯಾಗಿ ಅಭ್ಯರ್ಥಿಗಳ ಎಸ್‍ಎಸ್‍ಎಲ್‍ಸಿ ಮತ್ತು ಪದವಿ ಸರ್ಟಿಪಿಕೇಟ್, ಪರೀಕ್ಷಾ ಪ್ರವೇಶ ಪತ್ರಗಳು, ಚೆಕ್‍ಗಳನ್ನ ಪಡೆದುಕೊಂಡಿದ್ದರು ಎಂದು ತಿಳಿಸಲಾಗಿದೆ. ಭಾನುವಾರ ನಡೆದ ಕೆಎಎಸ್ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಅಭ್ಯರ್ಥಿಯೊಬ್ಬರ ಕಡೆಯವರನ್ನು ಭೇಟಿಯಾಗಲು ವಿಜಯನಗರಕ್ಕೆ ಬಂದಿದ್ದಾಗ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.










