ಕೊಪ್ಪಳದಲ್ಲಿ ಕರಡಿ ದಾಳಿಗೆ ವ್ಯಕ್ತಿ ಬಲಿ- ಅರಣ್ಯ ಇಲಾಖೆ ವಿರುದ್ದ ಹೆಚ್ಚಾದ ಜನರ ಆಕ್ರೋಶ…

37
firstsuddi

ಕೊಪ್ಪಳ: ಕರಡಿ ದಾಳಿಗೆ ವ್ಯಕ್ತಿಯೋರ್ವ ಬಲಿಯಾಗಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ನಾಗೇಶನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಈರಪ್ಪ (32) ಕರಡಿ ದಾಳಿಗೆ ತುತ್ತಾಗಿ ಬಲಿಯಾದ ರೈತ. ಜಿಲ್ಲೆಯಲ್ಲಿ ನಿರಂತರವಾಗಿ ಜನರ ಮೇಲೆ ಕರಡಿಗಳು ದಾಳಿ ಮಾಡುತ್ತಿದ್ದು, ಮೇಲಿಂದ ಮೇಲೆ ಅನೇಕರ ಜೀವಗಳು ಹೋಗುತ್ತಿವೆ. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಜನರ ಆಕ್ರೋಶ ಕೂಡಾ ಹೆಚ್ಚಾಗುತ್ತಿದೆ.

ಎರಡು ದಿನದ ಹಿಂದೆ ಈರಪ್ಪ, ಬೈಕ್​​ನಲ್ಲಿ ತನ್ನ ಪತ್ನಿ, ಮಗಳನ್ನು ಬೈಕ್ ಮೇಲೆ ಕರೆದುಕೊಂಡು ನಾಗೇಶನಹಳ್ಳಿಯಿಂದ ಗ್ರಾಮದ ಹೊರವಲಯದಲ್ಲಿರುವ ತನ್ನ ತೋಟದ ಮನೆಗೆ ಹೋಗುತ್ತಿದ್ದರು. ಆದರೆ, ರಾತ್ರಿ ಸಮಯದಲ್ಲಿ ಮೂವರ ಮೇಲೆ ಕರಡಿ ದಾಳಿ ಮಾಡಿತ್ತು. ಹೀಗಾಗಿ ಮೂವರನ್ನು ಕೂಡಾ ಧಾರವಾಡದ ಎಸ್​​ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಈರಪ್ಪ ಇಂದು ನಸುಕಿನ ಜಾವ ಮೃತಪಟ್ಟಿದ್ದಾರೆ. ಇನ್ನು ಈರಪ್ಪನ ಪತ್ನಿ ಹೇಮವ್ವ ಮತ್ತು ಪುತ್ರಿ ಗೌತಮಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.