ನೀರಿನ ಸಂಪ್‌ಗೆ ಬಿದ್ದು ತಾಯಿ, ಮಗು ಸಾವು…

29
firstsuddi

ಬೆಂಗಳೂರು: ನೀರಿನ ಸಂಪ್‌ಗೆ ಬಿದ್ದು ತಾಯಿ, ಮಗು ಮೃತಪಟ್ಟಿರುವ ಘಟನೆ ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಗ್ಗಪ್ಪ ಲೇಔಟ್‌ನ ಕವಿತಾ (30) ಮತ್ತು ಪವನ್ (6) ಮೃತ ದುರ್ದೈವಿಗಳು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಚೆಂದನೂರಿನ ಕವಿತಾ ಪುತ್ರನೊಂದಿಗೆ ಸುಗಪ್ಪ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೀವನ ನಿರ್ವಹಣೆಗೆ ಮನೆ ಸಮೀಪದ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಅವರ ಮನೆ ಪಕ್ಕದಲ್ಲೇ ಖಾಲಿ ಜಾಗ ಇದ್ದು, 10 ಅಡಿ ಆಳದ ನೀರಿನ ಸಂಪ್ ಇದೆ.

ಕವಿತಾ ನಿನ್ನೆ ಎಂದಿನಂತೆ ಮನೆ ಕೆಲಸಕ್ಕೆ ಹೋಗಿದ್ದು, ಸಂಜೆ ಪುತ್ರ ಪವನ್ ಪಕ್ಕದ ಖಾಲಿ ಜಾಗದಲ್ಲಿ ಆಟವಾಡುವಾಗ ಆಯತಪ್ಪಿ 10 ಅಡಿ ಆಳದ ನೀರಿನ ಸಂಪ್‌ಗೆ ಬಿದ್ದಿದ್ದಾನೆ. ಅದನ್ನು ಗಮನಿಸಿದ ಕವಿತಾ ಕೂಡಲೇ ಬಂದು ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಆಕೆಯೂ ನಿಯಂತ್ರಣ ತಪ್ಪಿ ಸಂಪ್ ಒಳಗೆ ಬಿದ್ದಿದ್ದಾರೆ. ಹೀಗಾಗಿ ತಾಯಿ-ಮಗು ಇಬ್ಬರೂ ಸಂಪ್‌ನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯ ನೆರವಿನಿಂದ ಮೃತದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಸಂಬಂಧ ಖಾಲಿ ಜಾಗದ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಸ್ವಾಭಾವಿಕವಾಗಿ ನಡೆದಿರುವ ಘಟನೆಯೋ? ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.