ಡೆಹ್ರಾಡೂನ್: ಚಿಪ್ಕೊ ಚಳುವಳಿಯ ನಾಯಕ ಸುಂದರ್ ಲಾಲ್ ಬಹುಗುಣ ಅವರು ಕೋವಿಡ್ ಸೋಂಕಿಗೆ ತುತ್ತಾಗಿ ವಿಧಿವಶರಾಗಿದ್ದಾರೆ.
ಸುಂದರ್ ಲಾಲ್ ಬಹುಗುಣ ಅವರಿಗೆ 94 ವರ್ಷ ವಯಸ್ಸಾಗಿತ್ತು. ಸೋಂಕು ದೃಢಪಟ್ಟ ಹಿನ್ನಲೆ ಮೇ 8 ರಂದು ಬಹುಗುಣ ಅವರನ್ನು ಉತ್ತರಾಖಂಡದ ರಿಷಿಕೇಶ್ ನಲ್ಲಿರುವ ಏಮ್ಸ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಲ್ಲದೇ ಮಧುಮೇಹ ಹಾಗೂ ನ್ಯುಮೋನಿಯಾದಿಂದಲೂ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪರಿಸರವಾದಿ ಎಂದೇ ಪ್ರಖ್ಯಾತಿ ಪಡೆದಿದ್ದ ಸುಂದರ್ ಲಾಲ್ ಬಹುಗುಣ ಅವರು ಚಿಪ್ಕೋ ಚಳುವಳಿ ಮೂಲಕ ಪರಿಸರ ನಾಶದ ವಿರುದ್ದ ದನಿಯೆತ್ತಿದ್ದರು. ತೆಹ್ರಿ ಅಣೆಕಟ್ಟು ವಿರುದ್ಧದ ಚಳವಳಿಯಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಇವರ ಪರಿಸರ ಆಂದೋಲನವನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ 2009 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.










