ಕೊರೊನಾಗೆ ಹೆದರಿ ಮಗನೊಂದಿಗೆ 3 ವರ್ಷಗಳ ಕಾಲ ಮನೆಯಲ್ಲೇ ಲಾಕ್ ಆಗಿದ್ದ ತಾಯಿ!

57
firstsuddi

ಲಕ್ನೋ: ಕೊರೊನಾಗೆ ಹೆದರಿ ಮಹಿಳೆಯೊಬ್ಬರು ಅಪ್ರಾಪ್ತ ಮಗನ ಜೊತೆ 3 ವರ್ಷಗಳ ಕಾಲ ತನ್ನ ಮನೆಯಲ್ಲೇ ಲಾಕ್ ಆಗಿದ್ದ ಘಟನೆ ಗುರುಗ್ರಾಮ್ ನ ಚಕ್ಕರ್ ಪುರದಲ್ಲಿ ನಡೆದಿದೆ.

ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ಮಹಿಳೆಯ ಪತಿ ಸುಜನ್ ಮಾಝಿ ಚಕ್ಕರ್ಪುರ ಪೊಲೀಸ್ ಠಾಣೆಗೆ ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು, ಆರೋಗ್ಯ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ನಿವಾಸಕ್ಕೆ ತಲುಪಿ ಮುಖ್ಯ ಬಾಗಿಲನ್ನು ಮುರಿದು, ಮುನ್ಮುನ್ ಮಜ್ಹಿ ಹಾಗೂ ಆಕೆಯ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ.

ಮಗನೊಂದಿಗೆ 3 ವರ್ಷಗಳ ಕಾಲ ಬಂಧನದಲ್ಲಿದ್ದ ಮಹಿಳೆ ತನ್ನ ಪತಿಯನ್ನು ಸಹ ಮನೆಯೊಳಗೆ ಬರಲು ಬಿಟ್ಟಿರಲಿಲ್ಲ. ಇದರಿಂದಾಗಿ ಮಾಝಿ ತನ್ನ ಕುಟುಂಬವನ್ನು ವಿಡಿಯೋ ಕರೆಗಳ ಮೂಲಕ ಮಾತ್ರ ಸಂಪರ್ಕಿಸುತ್ತಿದ್ದರು. ಮನೆಯ ಬಾಡಿಗೆ ಕಟ್ಟುವುದು, ವಿದ್ಯುತ್ ಕಟ್ಟುವುದು, ಮಗನ ಶಾಲಾ ಶುಲ್ಕ ಕಟ್ಟುವುದು, ದಿನಸಿ ಸಾಮಾನು, ತರಕಾರಿಗಳನ್ನು ಪಡೆದುಕೊಂಡು ಮನೆಯ ಮುಖ್ಯ ಬಾಗಿಲಿನ ಹೊರಗೆ ಇಟ್ಟು ಹೋಗುತ್ತಿದ್ದರು.

ಮುನ್ಮುನ್ ಮಜ್ಹಿ ಮನೆಯಲ್ಲೇ ಮಗುವಿನ ಹಾಗೂ ಅವಳ ಕೂದಲನ್ನು ಕತ್ತರಿಸುತ್ತಿದ್ದಳು. ಅಷ್ಟೇ ಅಲ್ಲದೇ ಮನೆಯಲ್ಲಿ ಗ್ಯಾಸ್ ಸ್ಟೌ ಬದಲು ಇಂಡಕ್ಷನ್ ಮೂಲಕ ಅಡುಗೆ ಮಾಡುತ್ತಿದ್ದರು. 3 ವರ್ಷಗಳಿಂದ ಮನೆಯಲ್ಲಿದ್ದ ಕಸವನ್ನು ಕೂಡ ಹೊರಗೆ ಹಾಕಿರಲಿಲ್ಲ. ಅಷ್ಟೇ ಅಲ್ಲದೇ ಇಷ್ಟು ವರ್ಷಗಳ ಕಾಲ ಇಬ್ಬರೂ ಮನೆಯೊಳಗೆ ವಾಸಿಸುತ್ತಿದ್ದ ವಿಷಯ ಅಕ್ಕಪಕ್ಕದವರಿಗೆ ಸುಳಿವು ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ.