ಬೆಳಗಾವಿ : ಕೋವಿಡ್ ಹೆಚ್ಚಳವಾಗಿರುವ ಹಿನ್ನೆಲೆ ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಕೆ. ಸುಧಾಕರ್ ಅವರು, ಜಾಗತಿಕ ಕೋವಿಡ್ ಸ್ಥಿತಿಗತಿಯ ವರದಿಯನ್ನು ತಾಂತ್ರಿಕಾ ಸಲಹಾ ಸಮಿತಿ ಇಂದು ಕೊಟ್ಟಿದೆ. ಎಸಿ ಹಾಲ್, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಬಳಕೆ ಮಾಡಬೇಕು ಎಂದು ತಿಳಿಸಿದರು.
ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟ್ ಮಾಡಲಾಗುವುದು ಜೊತೆಗೆ ಕೇಂದ್ರ ಮಾರ್ಗಸೂಚಿ ಅನ್ವಯ ಟೆಸ್ಟ್ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ ಎಂದರು.
ಕೋವಿಡ್ ಕಡಿಮೆ ಆದ್ದರಿಂದ ಜನ ಮೂರನೇ ಡೋಸ್ ಪಡೆದಿಲ್ಲ. 20% ಜನ ಮಾತ್ರ ಮೂರನೇ ಡೋಸ್ ಪಡೆದಿದ್ದಾರೆ. ಎಲ್ಲರೂ 3ನೇ ಡೋಸ್ ಪಡೆಯಿರಿ. ಯಾವುದೇ ಅಂತೆ ಕಂತೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಲಸಿಕೆ ಮೂಲಕ ನಾವು ನಮ್ಮನ್ನ ರಕ್ಷಣೆ ಮಾಡಿಕೊಳ್ಳಬೇಕು, ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದು ತಿಳಿಸಿದರು.
ಕೋವಿಡ್ ತಳಿ ಬಿಎಫ್7 ಯಾವುದೇ ಕ್ಷಣದಲ್ಲಿ ನಮ್ಮ ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯ ಕ್ರಮ ಅಗತ್ಯ. ಜನರು ಸರ್ಕಾರದ ಜೊತೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ. ಹೊರಾಂಗಣ ಪ್ರದೇಶದಲ್ಲಿ ಅಷ್ಟಾಗಿ ಪ್ರಾಬ್ಲಮ್ ಆಗಲ್ಲ, ಕ್ಲೋಸ್ ಪ್ಲೇಸ್ ಅಲ್ಲಿ ಮಾಸ್ಕ್ ಕಡ್ಡಾಯ. ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಆ ನಂತರದಲ್ಲಿ ಹೊಸ ವರ್ಷದ ಆಚರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ. ಸಂಜೆಯೊಳಗೆ ಸರ್ಕಾರದ ನಿರ್ಧಾರ ತಿಳಿಸ್ತೇವೆ ಎಂದರು.










