ಬೆಂಗಳೂರು: ನಿಮಗೆ ಕೊರೋನಾ ಮಾರಕ ರೋಗ ಬರಬಾರದು ಅಂತಿದ್ರೆ ದಿನಕ್ಕೆ ಮೂರು ಹೊತ್ತು ಈರುಳ್ಳಿ ತಿನ್ನಿ! ಹೌದು ಈರುಳ್ಳಿ ತಿನ್ನೋದ್ರಿಂದ ಕೊರೋನಾ ಬರಲ್ಲ ಎಂದು ಹೇಳಿದ್ದು ಮಾಜಿ ಸಚಿವ ಸಿಎಂ ಇಬ್ರಾಹಿಂ! ಕೊರೋನಾ ವೈರಸ್ ರಾಜ್ಯದಾದ್ಯಂತ ಜನರಲ್ಲಿ ಭೀತಿ ಹುಟ್ಟಿಸಿರುವ ನಡುವೆಯೇ ಮಾಜಿ ಸಚಿವ ಇಬ್ರಾಹಿಂ ಅವರು ರೋಗಕ್ಕೆ ನಾಟಿ ಔಷಧಿಯ ಸಲಹೆ ಕೊಟ್ಟಿದ್ದಾರೆ. ದಿನಕ್ಕೆ ಮೂರು ಬಾರಿ ಈರುಳ್ಳಿಗೆ ಉಪ್ಪು ಸೇರಿಸಿ ತಿಂದರೆ ಕೊರೋನಾ ಬರಲ್ಲ ಎಂದು ಇಬ್ರಾಹಿಂ ಅವರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಹಾವಳಿ ತಡೆಯಲು ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ನಮ್ಮಲ್ಲಿ ಕೊರೋನಾ ತಪಾಸಣೆ ಕೇಂದ್ರಗಳಿಲ್ಲ. ಚೀನಾ ಸೇರಿ ಅನೇಕ ದೇಶದಲ್ಲಿರುವಂತೆ ತಪಾಸಣಾ ಕೇಂದ್ರ ಸ್ಥಾಪನೆ ಆಗಬೇಕು. ರೋಗಿಯ ರಕ್ತ ಪರೀಕ್ಷೆ ನಡೆಸಿ ಕೊರೋನಾ ಪತ್ತೆಹಚ್ಚುವುದರಲ್ಲಿ ಆತ ಸಾವನ್ನಪ್ಪಿರುತ್ತಾನೆ ಎಂದು ಮಾಜಿ ಸಚಿವರು ಅಭಿಪ್ರಾಯಪಟ್ಟರು. ಇಷ್ಟೇ ಅಲ್ಲದೆ ದೇಶದ ಆರ್ಥಿಕತೆಗೆ ಸಹ ಕೊರೋನಾ ವೈರಸ್ ದಾಳಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಕಾಳಜಿವಹಿಸಬೇಕು ಎಂದು ಇಬ್ರಾಹಿಂ ಅವರು ಹೇಳಿದ್ದಾರೆ.










