ಮೂಡಿಗೆರೆ : ಸರ್ಕಾರದ ವತಿಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ…

466
firstsuddi

ಮೂಡಿಗೆರೆ : ಪಟ್ಟಣದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಸರ್ಕಾರದ ವತಿಯಿಂದ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್ ಅವರು, ರಾಜ್ಯ ಸರ್ಕಾರದಿಂದ ಪ್ರತೀ ವರ್ಷ ಅಂಗವಿಕಲರಿಗೆಂದು ನೀಡುವ ಅನುದಾನದಲ್ಲಿ ನೀಡುವ 15 ಲಕ್ಷ ರೋಪಾಯಿಗಳನ್ನು ಬಳಸಿಕೊಂಡು 25 ಮಂದಿಗೆ ತ್ರಿಚಕ್ರ ವಾಹನವನ್ನು ನೀಡಲಾಗುತ್ತಿದೆ. ಇದರಲ್ಲಿ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ 14, ತಾ.ಪಂ ಸದಸ್ಯರ ಅನುದಾನದಲ್ಲಿ 11 ಮಂದಿ ಅಂಗವಿಕಲರಿಗೆ ತ್ರಿಚಕ್ರ ವಾಹನವನ್ನು ನೀಡಲಾಗುತ್ತದೆ. ಫಲಾನುಭವಿ ಆಯ್ಕೆ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗಿತ್ತು, ಶೇ.70 ರಷ್ಟು ನೈಜ ಅಂಗವಿಕಲ ಫಲಾನುಭವಿಗಳನ್ನು ಗುರುತಿಸಿ ನೀಡಲಾಗುತ್ತಿದೆ. ನಮ್ಮ ಅರಿವಿಗೆ ಬಾರದಿರುವ ಅಥವಾ ಬಾಕಿ ಉಳಿದಿರುವ ನೈಜ ಅಂಗವಿಕಲರು ಈ ಪ್ರಕ್ರಿಯೆಯಲ್ಲಿ ಸಹಾಯವನ್ನು ಪಡೆಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅಂಥಹವರನ್ನು ಗುರುತಿಸಿ ನೀಡಲಾಗುವುದು ಎಂದರು.
ತಾ.ಪಂ. ಅಧ್ಯಕ್ಷ ಕೆ.ಸಿ ರತನ್ ಅವರು ಮಾತನಾಡಿ, ತಾಲ್ಲೂಕು ಪಂಚಾಯತಿ ಅನುದಾನದಲ್ಲಿ 4 ವರ್ಷಗಳಿಂದ 30 ತ್ರಿಚಕ್ರ ವಾಹನಗಳನ್ನು ಅಂಗವಿಕಲ ಫಲಾನುಭವಿಗಳಿಗೆ ನೀಡಲಾಗಿದೆ. ವಾಹನಗಳಿಗೆ ಅಳವಡಿಸಲಾಗಿರುವ ಹೆಚ್ಚುವರಿ ಚಕ್ರಗಳನ್ನು ರಕ್ಷಣಾ ದೃಷ್ಟಿಯಿಂದ ನೀಡಲಾಗಿದ್ದು ಅದನ್ನು ತೆಗೆಯಬಾರದು. ಈ ವಾಹನಗಳನ್ನು ಅಂಗವಿಕಲರ ಕಲ್ಯಾಣಕ್ಕಾಗಿ ನೀಡಲಾಗಿದ್ದು ಸರ್ಕಾರದ ಉದ್ದೇಶಿತ ಯೋಜನೆ ಈಡೇರಬೇಕು. ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ ಎಂಬ ಹಲವರ ಆರೋಪಕ್ಕೆ ಯಾವುದೇ ಬೆಲೆ ಇಲ್ಲ. ಜನಸಾಮಾನ್ಯರ ದೃಷ್ಟಿಯಲ್ಲಿ ಯೋಚನೆ ಮಾಡಿ ಅನುದಾನಗಳನ್ನು ಬಿಡುಗಡೆ ಮಾಡುತ್ತಿರುವುದು ಇಂದಿನ ಕಾರ್ಯಕ್ರಮ ಸಾಕ್ಷಿಯಾಗಲಿದೆ. ಎಂದರು.
ವಾಹನ ವಿತರಣಾ ಕಾರ್ಯಕ್ರಮದಲ್ಲಿ ತಾ.ಪಂ.ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರುಗಳಾದ ರಂಜನ್ ಅಜಿತ್ ಕುಮಾರ್, ಸುಂದರ್ ಕುಮಾರ್, ಭಾರತಿ ರವೀಂದ್ರ, ಸವಿತಾ ರಮೇಶ್, ವೀಣಾ ಉಮೇಶ್, ಜಿ.ಪಂ.ಸದಸ್ಯರಾದ ಸುಧಾ ಯೋಗೀಶ್, ಅಮಿತಾ ಮುತ್ತಪ್ಪ, ಕಾರ್ಯನಿರ್ವಹಣಾ ಅಧಿಕಾರಿ ವೆಂಕಟೇಶ್ ಇದ್ದರು.