ಚಿಕ್ಕಮಗಳೂರು : ಮೇಲ್ವರ್ಗದವರು ಅತಿಕ್ರಮಿಸಿ ಹಾಕಿರುವ ಬೇಲಿಯನ್ನು ತೆರವುಗೊಳಿಸುವಂತೆ ಪರಿಶಿಷ್ಟ ಸಮುದಾಯದವರಿಂದ ಜಿಲ್ಲಾಡಳಿತಕ್ಕೆ ಒತ್ತಾಯ…

521
firstsuddi

ಚಿಕ್ಕಮಗಳೂರು : ತಮ್ಮ ಸಮುದಾಯದವರಿಗೆ ನಿವೇಶನ ವಿತರಿಸಲು ನಿಗಧಿಗೊಳಿಸಿರುವ ಸರ್ಕಾರಿ ಭೂಮಿಯನ್ನು ಮೇಲ್ವರ್ಗದವರು ಅತಿಕ್ರಮಿಸಿ ಹಾಕಿರುವ ಬೇಲಿಯನ್ನು ತೆರವುಗೊಳಿಸುವಂತೆ ಕಡೂರು ತಾಲ್ಲೂಕು ದೊಡ್ಡ ಪಟ್ಟಣಗೆರೆಯ ಪರಿಶಿಷ್ಟ ಸಮುದಾಯದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ
ದಲಿತ ಸಂಘರ್ಷ ಸಮಿತಿಯ ಮುಖಂಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿಯ ಸಹಾಯಕ ಚಂದ್ರಶೇಖರ್ ಅವರನ್ನು ಮಂಗಳವಾರ ಭೇಟಿಮಾಡಿದ ಪರಿಶಿಷ್ಟ ಸಮುದಾಯದವರು ಈ ಸಂಬಂದ ಮನವಿ ಸಲ್ಲಿಸಿದರು.

ದೊಡ್ಡಪಟ್ಟಣಗೆರೆ ಗ್ರಾಮದ ಸ ನಂ25/2ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ತಮ್ಮ ಸಮುದಾಯದ ಬಡವರಿಗೆ ನಿವೇಶನ ನೀಡುವಂತೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕಡೂರು ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸ್ಥಳ ತನಿಖೆ ಮಾಡಿ ಸ್ಕೆಚ್ ತಯಾರಿಸಿ ತಾಲ್ಲೂಕು ಕಛೇರಿಗೆ ನೀಡಿದ್ದು ಇದೀಗ ಆ ಜಾಗ ಮಂಜೂರಾತಿ ಹಂತದಲ್ಲಿದೆ ಎಂದು ತಿಳಿಸಿದರು
ಅದರೆ ದೊಡ್ಡಪಟ್ಟಣಗೆರೆ ಮತ್ತು ಸುತ್ತಮುತ್ತಲಿನ ಮೇಲ್ವರ್ಗದವರು ಆ ಭೂಮಿಯನ್ನು ಅತಿಕ್ರಮಿಸಿ ಅಕ್ರಮವಾಗಿ ನಾಮಫಲಕ ಅಳವಡಿಸಿ ತಂತಿ ಬೇಲಿಯನ್ನು ಹಾಕಿದ್ದು ಆ ಬಗ್ಗೆ ಪ್ರಶ್ನಿಸಲು ಹೋದವರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ನಾವು ಕಡೂರು ತಹಸೀಲ್ದಾರ್ ಹಾಗೂ ವೃತ್ತ ನಿರೀಕ್ಷಕರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಅವರುಗಳು ಬೇಲಿ ಮತ್ತು ನಾಮಫಲಕವನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಇದುವರೆಗೂ ತೆರವುಗೊಳಿಸಿಲ್ಲ ಎಂದು ದೂರಿದರು.
ಮೇಲ್ವರ್ಗದವರು ನಮ್ಮ ಮೇಲೆ ಹಲ್ಲೆ ಮಾಡಿ ದೌರ್ಜನ್ಯವೆಸಗುವ ಸಂಭವವಿರುವುದರಿಂದ ತಮಗೆ ರಕ್ಷಣೆ ನೀಡುವುದರ ಜೊತೆಗೆ ಬೇಲಿ ಮತ್ತು ನಾಮಫಲಕವನ್ನು ಹಾಗೂ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಆದೇಶಿಸಬೇಕು ಎಂದು ಆಗ್ರಹಿಸಿದರು.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಕರ್ನಾಟಕ ದಲಿತ ಸಂರ್ಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ವಿಭಾಗೀಯ ಸಂಘಟನಾ ಸಂಚಾಲಕ ಶೂದ್ರ ಶ್ರೀನಿವಾಸ್, ತಾಲ್ಲೂಕು ಸಂಚಾಲಕ ಚಂದ್ರಪ್ಪ, ಉದ್ದೇಬೋರನಹಳ್ಳಿ ರಮೇಶ್, ನಾರಾಯಣ, ಪಿ.ಜಿ.ಸಗುನಪ್ಪ, ಹೆಚ್.ಜಗದೀಶ್, ಪಿ.ಎಂ.ನಾರಾಯಣಮೂರ್ತಿ ಹಾಜರಿದ್ದರು.