ಚಾಮರಾಜನಗರ: ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಮಿಳುನಾಡು ಮೂಲದ ವೈದ್ಯೆಯೊಬ್ಬರು ಇಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಡಾ. ಸಿಂಧುಜಾ(28) ಮೃತ ವೈದ್ಯೆ. ಇವರು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರು. ಮಹದೇಶ್ವರ ಕಾಲೇಜು ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಇಂದು ಮನೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.
ಸಿಂಧುಜಾ ಅವರ ಮೃತದೇಹ ನೆಲದ ಮೇಲೆ ಬಿದ್ದಿದ್ದು, ಶವದ ಬಳಿ ಸಿರೆಂಜ್ ಪತ್ತೆಯಾಗಿದೆ. ಇನ್ನೂ ಸಿಂಧುಜಾಗೆ ಜನವರಿ 2 ಕ್ಕೆ ಮದುವೆ ನಿಶ್ಚಯವಾಗಿತ್ತು. ತಮಿಳುನಾಡಿನವರಾದ ಸಿಂಧುಜಾ ಎಂಬಿಬಿಎಸ್ ಕೋರ್ಸ್ ಮಾಡಿದ್ದರು. ಬಳಿಕ ಸ್ನಾತಕೋತ್ತರ ಪದವಿಗೆ ಸೇರಿದ್ದರು. ಸ್ನಾತಕೋತ್ತರ ಪದವಿ ಶಿಕ್ಷಣದ ಭಾಗವಾಗಿ ಅವರು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










