ಮುರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸಾವು…

58
firstsuddi

ಉಡುಪಿ: ಮುರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸಾವನ್ನಪ್ಪಿರುವ ಘಟನೆ ಕುಂದಾಪುರ ಹೆಮ್ಮಾಡಿ ಸಮೀಪದ ಸುಳ್ಸೆ ಕರಣಿಕರ ಮನೆ ಬಳಿ ನಡೆದಿದೆ.

ಸುಳ್ಸೆ ಯಕ್ಷಿಬ್ರಹ್ಮ ನಂದಿಕೇಶ್ವರ ದೇವಸ್ಥಾನ ಸಮೀಪದ ಸುಳ್ಸೆಯರ ಮನೆ ನಿವಾಸಿ ಮಹಾಬಲ ದೇವಾಡಿಗ (55), ಪತ್ನಿ ಲಕ್ಷ್ಮೀ ದೇವಾಡಿಗ (49) ಮೃತ ದಂಪತಿಗಳು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ನಿನ್ನೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಕಳೆದರೂ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಪತ್ನಿ ಲಕ್ಷ್ಮೀ ಅನುಮಾನಗೊಂಡು ಪತಿಯನ್ನು ಹುಡುಕಿಕೊಂಡು ಹೋದಾಗ ಕಾಲುದಾರಿಯಲ್ಲಿ ತುಂಡರಿಸಿದ ವಿದ್ಯುತ್ ತಂತಿ ತಗುಲಿ ಪತಿ ಬಿದ್ದಿರುವುದು ಲಕ್ಷ್ಮೀ ಗಮನಕ್ಕೆ ಬಂದಿದೆ. ತಕ್ಷಣವೇ ಪತಿಯನ್ನು ರಕ್ಷಿಸಲು ಸ್ಥಳೀಯರಲ್ಲಿ ನೆರವಿಗೆ ಬರುವಂತೆ ಕೂಗತೊಡಗಿದಾಗ ಸಮೀಪದ ಮನೆಯರು ಬರುವಷ್ಟರಲ್ಲಾಗಲೇ ಮಳೆ ನೀರಿನಿಂದ ಒದ್ದೆಯಾದ ಮರದ ತುಂಡಲ್ಲಿ ರಕ್ಷಣೆಗೆ ಧಾವಿಸಿದ ಪರಿಣಾಮ ಲಕ್ಷ್ಮೀಯವರಿಗೂ ವಿದ್ಯುತ್ ಪ್ರವಹಿಸಿ ಅವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೆಸ್ಕಾಂ ಇಲಾಖೆಯ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾಬಲ ದೇವಾಡಿಗ ಅವರು ಸಾವನ್ನಪ್ಪಿದ ಕಾಲು ದಾರಿಯ ಮಧ್ಯೆ ಎರಡು ವಿದ್ಯುತ್ ತಂತಿ ಹಾದು ಹೋಗಿದ್ದು, ಅನೇಕ ಕಡೆಗಳಲ್ಲಿ ತುಂಡಾದ ತಂತಿಗಳನ್ನು ಜೋಡಿಸಲಾಗಿದೆ. ಎರಡು ತಂತಿಯಲ್ಲಿ ಒಂದು ತಂತಿ ತುಂಡಾಗಿ ಬಿದ್ದಿದ್ದು, ಇದೇ ತಂತಿ ತಗುಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೆಸ್ಕಾಂ ಇಲಾಖೆಯ ನಿರ್ಲಕ್ಷವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಕುಂದಾಪುರ ಡಿವೈಎಸ್‍ಪಿ ಬೆಳ್ಳಿಯಪ್ಪ, ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಜಯರಾಮ್ ಗೌಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.