ಕ್ಯಾನ್ಸರ್ ಎದುರು ಜೀವನ್ಮರಣ ಹೋರಾಟ ನಡೆಸಿ ಇಹಲೋಕ ತ್ಯಜಿಸಿದ ಜಿಂಬಾಬ್ವೆ ಕ್ರಿಕೆಟ್ ಲೆಜೆಂಡ್ ಹೀತ್ ಸ್ಟ್ರೀಕ್.

92
firstsuddi

ಜೋಹಾನ್ಸ್‌ಬರ್ಗ್: ಹಲವು ದಿನಗಳಿಂದ ಕ್ಯಾನ್ಸರ್ ಎದುರು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ (49) ಅವರು ನಿಧನರಾಗಿದ್ದಾರೆ.

ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಟ್ರೀಕ್ ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

1993ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದ ಹೀತ್ ಸ್ಟ್ರೀಕ್, ರಾವಲ್ಪಿಂಡಿಯಲ್ಲಿ ನಡೆದ 2ನೇ ಟೆಸ್ಟ್‌ನಲ್ಲೇ 8 ವಿಕೆಟ್ ಪಡೆಯುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದರು.

ಹೀತ್ ಸ್ಟ್ರೀಕ್, ಜಿಂಬಾಬ್ವೆ ಕ್ರಿಕೆಟ್ ಕಂಡ ದಿಗ್ಗಜ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಇನ್ನು 2000ದಿಂದ 2004ರ ವರೆಗೆ ನಾಯಕನಾಗಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಜಿಂಬಾಬ್ವೆ ಪರ 12 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ 65 ಟೆಸ್ಟ್ ಹಾಗೂ 189 ಏಕದಿನ ಪಂದ್ಯಗಳನ್ನಾಡಿದ್ದರು. ಹಲವಾರು ಬಾರಿ ಏಕಾಂಗಿಯಾಗಿ ಜಿಂಬಾಬ್ವೆ ತಂಡವನ್ನು ಗೆಲುವಿನ ದಡ ಸೇರಿಸಿದ ಹೆಗ್ಗಳಿಕೆ ಹೀತ್ ಸ್ಟ್ರೀಕ್ ಅವರಿಗಿದೆ. ಇಂದಿಗೂ 100+ ಟೆಸ್ಟ್ ವಿಕೆಟ್ ಕಬಳಿಸಿದ ಜಿಂಬಾಬ್ವೆ ತಂಡದ ಮೊದಲ ಹಾಗೂ ಏಕೈಕ ಬೌಲರ್ ಎನ್ನುವ ಕೀರ್ತಿ ಹೀತ್ ಸ್ಟ್ರೀಕ್ ಅವರಿಗಿದೆ.

ಜಿಂಬಾಬ್ವೆ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಹೀತ್ ಸ್ಟ್ರೀಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 1,990 ರನ್, ಏಕದಿನ ಕ್ರಿಕೆಟ್‌ನಲ್ಲಿ 2,943 ರನ್ ಗಳಿಸಿದ್ದಾರೆ. ಹರಾರೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 127 ರನ್ ಗಳಿಸಿದ್ದು ಏಕೈಕ ಟೆಸ್ಟ್ ಶತಕವಾಗಿದೆ.

ಜಿಂಬಾಬ್ವೆ ತಂಡದ ಮಾಜಿ ಸ್ಪಿನ್ ಮಾಂತ್ರಿಕ ಹೆನ್ರಿ ಒಲೊಂಗಾ ಈ ವಿಷಯವನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂತಾಪ ಸೂಚಿಸಿದ್ದಾರೆ.