ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಪತಿ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಸುಮಿತ್ರಾ ಕೊಲೆಯಾದ ದುರ್ದೈವಿ ಹಾಗೂ ಆರೋಪಿ ಪತಿಯನ್ನು ಕಾಳಪ್ಪ ಎಂದು ಗುರುತಿಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ಜಗಳ ತಾರಕಕ್ಕೇರಿ ಪತಿ ಕಾಳಪ್ಪ ಅವರು ತಮ್ಮ ಮನೆಯಲ್ಲಿದ್ದ ಸಿಂಗಲ್ ಬ್ಯಾರಲ್ ಗನ್ನಿಂದ ಪತ್ನಿಯ ಮೇಲೆ ಗುಂಡನ್ನು ಹಾರಿಸಿ ಹತ್ಯೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗುಂಡಿನ ಶಬ್ಧ ಕೇಳಿಸುತ್ತಿದ್ದಂತೆ ಸ್ಥಳಿಯರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದು, ಮಾಹಿತಿ ತಿಳಿಯುತ್ತಿದ್ದತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಜ್ಞಾಹೀನನಾಗಿದ್ದ ಕಾಳಪ್ಪ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










