ಗಂಭೀರ ಆರೋಗ್ಯ ಸಮಸ್ಯೆ, ಮನೆಯಲ್ಲಿ ಯಾರಾದರೂ ನಿಧನರಾದರೆ ಮಾತ್ರ ರಜೆ : ಡಿಸಿಪಿ ಆದೇಶ…

73
firstsuddi

ಬೆಂಗಳೂರು : ಗಂಭೀರ ಆರೋಗ್ಯ ಸಮಸ್ಯೆ, ಮನೆಯಲ್ಲಿ ಯಾರಾದರೂ ನಿಧನರಾದರೆ ಮಾತ್ರ ಸಿಬ್ಬಂದಿ ರಜೆ ಕೇಳಬಹುದು. ಅನಗತ್ಯ ರಜೆ ಪಡೆದುಕೊಂಡರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬು ಆದೇಶ ಹೊರಡಿಸಿದ್ದಾರೆ.

ಆಗ್ನೇಯ ವಿಭಾಗದ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಸಿ ಹುದ್ದೆಯಿಂದ ಪಿಐ ಹುದ್ದೆಯ ತನಕ ಎಲ್ಲ ಪೊಲೀಸ್ ಸಿಬ್ಬಂದಿ ಬೇರೆಬೇರೆ ಕಾರಣಗಳಿಂದ ರಜೆ ಹೋಗುತ್ತಿದ್ದು, ಠಾಣಾ ಕರ್ತವ್ಯಕ್ಕೆ ಹಾಗೂ ಕಚೇರಿ ಕರ್ತವ್ಯಕ್ಕೆ ತೊಂದರೆಯಾಗುತ್ತಿದೆ. ಇನ್ನು ಮುಂದೆ ಯಾವುದೇ ಪೊಲೀಸ್ ಅಧಿಕಾರಿ, ಸಿಬ್ಬಂದಿ ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದರೆ ಮಾತ್ರ ಹಾಗೂ ಮನೆಗಳಲ್ಲಿ ಯಾರಾದರೂ ಮೃತಪಟ್ಟಲ್ಲಿ ಮಾತ್ರ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ. ಸಕಾರಣವಿಲ್ಲದೆ ರಜೆ ಪಡೆಯುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.

ಯಾವುದೇ ಠಾಣಾಧಿಕಾರಿಗಳು ಹಾಗೂ ಎಸಿಪಿ ಅವರು ಮೇಲೆ ತಿಳಿಸಿರುವ ಕಾರಣ ಹೊರತುಪಡಿಸಿ ಯಾವುದೇ ರೀತಿಯ ರಜೆಗೆ ಶಿಫಾರಸು ಮಾಡದಂತೆ ಸೂಚಿಸಲಾಗಿದೆ. ಪದೇ ಪದೇ ಕಚೇರಿಗೆ ಬಂದು ರಜೆಯ ಬಗ್ಗೆ ಪ್ರಸ್ತಾಪಿಸಿದರೆ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು. ರಜೆ ಹೋಗುವ ಎಲ್ಲಾ ಪೊಲೀಸ್ ಅಧಿಕಾರಿ / ಸಿಬ್ಬಂದಿ ಹಾಗೂ ಲಿಪಿಕ ಸಿಬ್ಬಂದಿ ಡಿಸಿಪಿಯಿಂದ ರಜೆ ಮಂಜೂರು ಮಾಡಿಕೊಳ್ಳಬೇಕು ಎಂದು ಜ್ಞಾಪನ ಪತ್ರದಲ್ಲಿ ತಿಳಿಸಲಾಗಿದೆ. ಇದು ಪೊಲೀಸ್ ಇಲಾಖೆ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.