ಗದಗದ ನಾಲ್ವರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು- ಮನೆ ಮಗನಿಂದಲೇ ಕೊಲೆಗೆ ಸುಪಾರಿ…

29
firstsuddi

ಗದಗ: ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದ ಪ್ರಕರಣ ಸಂಬಂಧ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಗದಗ ಎಸ್​​ಪಿ ಬಿಎಸ್ ನೇಮಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಆಸ್ತಿ ಮಾರಾಟ ವಿಚಾರವಾಗಿ ಕಲಹ ಉಂಟಾಗಿ ಮನೆಯ ಮಗನೇ ಕೊಲೆಗೆ ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಪ್ರಕರಣದಲ್ಲಿ ಪ್ರಕಾಶ್ ಬಾಕಳೆ ಪುತ್ರ ವಿನಾಯಕ್ ಬಾಕಳೆ (31) ಪ್ರಮುಖ ಆರೋಪಿಯಾಗಿದ್ದು, ಕೊಲೆಗೆ ಸುಪಾರಿ ನೀಡಿದ್ದ. ಇನ್ನುಳಿದಂತೆ, ಗದಗ ನಗರದ ಫೈರೋಜ್ ಖಾಜಿ (29), ಗದಗನ ಜಿಶಾನ್ ಖಾಜಿ (24), ಮೀರಜ್​ನ ಸಾಹಿಲ್ ಖಾಜಿ (19), ಸೋಹೆಲ್ ಖಾಜಿ (19), ಮೀರಜ್ ಮೂಲದ ಸುಲ್ತಾನ್ ಶೇಖ್ (23), ಮಹೇಶ್ ಸಾಳೋಂಕೆ (21) ಹಾಗೂ ವಾಹಿದ್ ಬೇಪಾರಿ (21) ಎಂಬುವರನ್ನು ಬಂಧಿಸಲಾಗಿದೆ.

ಪ್ರಕರಣದ ಮೊದಲ ಆರೋಪಿ ವಿನಾಯಕ್ ಬಾಕಳೆ (ಪ್ರಕಾಶ್ ಬಾಕಳೆಯ ಮೊದಲ ಪತ್ನಿಯ ಮಗ) ಮತ್ತೊಬ್ಬ ಆರೋಪಿ ಫೈರೋಜ್​ಗೆ 65 ಲಕ್ಷ ರೂಪಾಯಿ ಹಣಕ್ಕೆ ಸುಪಾರಿ ಡೀಲ್ ಕೊಟ್ಟಿದ್ದ. ಮುಂಗಡವಾಗಿ 2 ಲಕ್ಷ ರೂಪಾಯಿ ಕೊಟ್ಟಿದ್ದ ವಿನಾಯಕ್ ಬಾಕಳೆ ತಂದೆ ಪ್ರಕಾಶ್ ಬಾಕಳೆ, ಅವರ ಪತ್ನಿ ಸುನಂದಾ ಹಾಗೂ ಪುತ್ರ ಕಾರ್ತಿಕ್ ಕೊಲೆಗೆ ಸಂಚು ಹೂಡಿದ್ದ. ತಂದೆ ಪ್ರಕಾಶ್ ಜೊತೆ ವ್ಯವಹಾರಿಕ ವೈಮನಸ್ಸಿನ ಕಾರಣ ಈ ಕೊಲೆಗೆ ಆತ ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕಾಶ್ ಹಿರಿಯ ಮಗನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. ಆದರೆ, ಪ್ರಕಾಶ್ ಗಮನಕ್ಕೆ ತಾರದೇ ಮಗ ವಿನಾಯಕ್ ಕೆಲ ಆಸ್ತಿ ಮಾರಿದ್ದ. ಆತನ ವರ್ತನೆಗೆ ಬೇಸತ್ತು ಪ್ರಕಾಶ್ ಬಾಕಳೆ ಜಗಳವಾಡಿದ್ದರು. ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಕಾಶ್, ಪತ್ನಿ ಸುನಂದಾ, ಪುತ್ರ ಕಾರ್ತಿಕ್ ಹತ್ಯೆಗೆ ಆರೋಪಿ ವಿನಾಯಕ್ ಸಂಚು ಹೂಡಿದ್ದ.

ಘಟನೆ ದಿನ ಪ್ರಕಾಶ್ ಹಾಗೂ ಅವರ ಪತ್ನಿ ಸುನಂದಾ ಬೇರೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಅವರು ಸಾವಿನಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಮನೆಗೆ ನುಗ್ಗಿದ್ದ ಹಂತಕರು ಅವರ ಬದಲಿಗೆ ಕಾರ್ತಿಕ್ ಜೊತೆ ಇದ್ದ ಸಂಬಂಧಿಕರನ್ನು ಹತ್ಯೆ ಮಾಡಿದ್ದಾರೆ. ಪ್ರಕಾಶ್ ಹಾಗೂ ಸುನಂದಾ ಎಂದು ಭಾವಿಸಿ ಹಂತಕರು ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಜತೆಗಿದ್ದ ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಇವರನ್ನು ಹತ್ಯೆ ಮಾಡಿದ್ದರು.

ಕೃತ್ಯ ನಡೆದು 72 ಗಂಟೆಯಲ್ಲೇ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೇಧಿಸಿದ್ದಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ್ದ ಸಿಬ್ಬಂದಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.