ಚಾಮರಾಜನಗರ : ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿದ್ದ ಪತಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ರಾಚಪ್ಪಾಜಿನಗರದ ಮುತ್ತುರಾಜ್ ಶಿಕ್ಷೆಗೊಳಗಾಗಿರುವ ಅಪರಾಧಿ. ಕಳೆದ 2013ರಲ್ಲಿ ಗರ್ಭಿಣಿ ಪತ್ನಿ ಕೊಂದ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಮುತ್ತುರಾಜ್ ಗೆ ಜೀವಾವಧಿ ಶಿಕ್ಷೆ ಮತ್ತು 2.10 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಮುತ್ತುರಾಜ್ ಟ್ರಾಕ್ಟರ್ ಚಾಲಕನಾಗಿದ್ದು, ಅದೇ ಗ್ರಾಮದ ಜ್ಯೋತಿ ಎಂಬ ಅನ್ಯಜಾತಿಯ ಯುವತಿಯನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದ. ಬಳಿಕ, ಪತ್ನಿ ಜೊತೆ ನಿತ್ಯ ರಂಪಾಟ ಮಾಡುತ್ತಿದ್ದ. ಈ ಮಧ್ಯೆ ಜ್ಯೋತಿ 3 ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿರುವುದರಿಂದ ತವರು ಮನೆಗೆ ಹೋಗಿ ಬರೋಣಾ ಎಂದು ಪುಸಲಾಯಿಸಿ ಬೈಕಿನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಜ್ಯೂಸ್ ನೊಟ್ಟಿಗೆ ಮದ್ಯ ಸೇರಿಸಿ ಕುಡಿಸಿ ಬಳಿಕ ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದನು.
ಗುರುತು ಪತ್ತೆಯಾಗಬಾರದೆಂದು ಆಕೆಯ ಎಡಕೆನ್ನೆಯನ್ನು ಸುಟ್ಟು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುತ್ತುರಾಜ್ ನನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದೀಗ ಮುತ್ತುರಾಜ್ನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.










