ಬೆಂಗಳೂರು : ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇದೀಗ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ಯೋಜನೆಯನ್ನು ಸಾಕಾರಗೊಳಿಸುತ್ತಿದೆ. ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣೆಗಾಗಿ ಬಿಎಂಟಿಸಿ ಅರ್ಜಿಯನ್ನು ಆಹ್ವಾನಿಸಿದೆ.
ನಗರದಲ್ಲಿ ಸುಮಾರು 850ಕ್ಕಿಂತಲೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಶೇ.80ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ನೌಕರರು ಪ್ರತಿನಿತ್ಯ ತಮ್ಮ ಕರ್ತವ್ಯ ಸ್ಥಳಕ್ಕೆ ಹೋಗಲು ಹಾಗೂ ವಾಸಸ್ಥಳಕ್ಕೆ ಹಿಂತಿರುಗಲು ಖಾಸಗಿ ಬಸ್, ಆಟೋ ಹಾಗೂ ಇತರೆ ಖಾಸಗಿ ಸಂಸ್ಥೆಯ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಿರುವುದು ಕಂಡುಬಂದಿದೆ. ಹೀಗಾಗಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ವನಿತಾ ಸಂಗಾತಿ ಯೋಜನೆಯಡಿಯಲ್ಲಿ ಉಚಿತವಾಗಿ ಮಾಸಿಕ ಬಸ್ ಪಾಸುಗಳನ್ನು ಜನವರಿ 22ರಿಂದ ವಿತರಣೆ ಮಾಡಲು ಕ್ರಮ ಕೈಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪಾಸು ಪಡೆಯುವ ವಿಧಾನ ಹೀಗಿದೆ :
• ವನಿತಾ ಸಂಗಾತಿ ಪಾಸು ಪಡೆಯಲಿಚ್ಚಿಸುವ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು, ಕರ್ತವ್ಯ ನಿರ್ವಹಿಸುವ ಗಾರ್ಮೆಂಟ್ಸ್ ಕಾರ್ಖಾನೆಯ ಮಾಲೀಕರಿಗೆ ಮನವಿ ಸಲ್ಲಿಸುವುದು.
• ಗಾರ್ಮೆಂಟ್ಸ್ ಮಾಲೀಕರು ಪಾಸು ಪಡೆಯಲಿಚ್ಚಿಸುವ ಮಹಿಳಾ ಕಾರ್ಮಿಕರ ಪಟ್ಟಿಯನ್ನು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಇ-ಮೇಲ್ ವಿಳಾಸ welfarecommissioner123@gmail.com ಗೆ ಸಲ್ಲಿಸುವುದು.
• ವನಿತಾ ಸಂಗಾತಿ ಪಾಸಿಗಾಗಿ ಗಾರ್ಮೆಂಟ್ಸ್ ಮಾಲೀಕರಿಂದ ಸ್ವೀಕರಿಸುವ ಕೋರಿಕೆಗಳನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯವರು ಪರಿಶೀಲಿಸಿ, ಅರ್ಹ ಮಹಿಳಾ ಕಾರ್ಮಿಕರ ಪಟ್ಟಿಯನ್ನು ಬೆಂಗಳೂರು ಸಾರಿಗೆ ಸಂಸ್ಥೆಗೆ ಒದಗಿಸುವುದು.
• ಬೆಂಗಳೂರು ನಗರ ಸಾರಿಗೆ ಸಂಸ್ಥೆಯು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸ್ವೀಕರಿಸುವ ಪಟ್ಟಿಗನುಸಾರವಾಗಿ, ಗಾರ್ಮೆಂಟ್ಸ್ ಮಾಲೀಕರಿಂದ ದಾಖಲೆಗಳ ಪ್ರತಿಗಳನ್ನು (ಹಾರ್ಡ್ ಕಾಫಿ) ಹಾಗೂ ಗಾರ್ಮೆಂಟ್ಸ್ ಮಾಲೀಕರ ಪಾಲಿನ ಮೊತ್ತ ಶೇ.40 ರಷ್ಟನ್ನು ಪಡೆದು (ಆರ್.ಟಿ.ಜಿ.ಎಸ್/ ಎನ್.ಇ.ಎಫ್.ಟಿ ಮೂಲಕ), ವನಿತಾ ಸಂಗಾತಿ ಪಾಸುಗಳನ್ನು ಕೆಂಪೇಗೌಡ ಬಸ್ ನಿಲ್ದಾಣ ಪಾಸು ಕೌಂಟರ್ ನಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
• ವನಿತಾ ಸಂಗಾತಿ ಪಾಸುಗಳನ್ನು ಪಡೆಯುವ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು ಬೆಂ.ಮ.ಸಾ.ಸಂಸ್ಥೆಯ ಮಾಸಿಕ ಪಾಸಿನ ಗುರುತಿನ ಚೀಟಿಯನ್ನು ಪಡೆಯುವುದು, ವನಿತಾ ಸಂಗಾತಿ ಪಾಸುಗಳನ್ನು ಪಡೆದ ಮಹಿಳಾ ಕಾರ್ಮಿಕರು ಸಂಸ್ಥೆಯ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.










