ಬೆಳಗಾವಿ: ಇಂದು ಸುವರ್ಣಸೌಧ ವೀಕ್ಷಣೆಗೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಗೃಹಲಕ್ಷ್ಮಿಯರು ಬಂದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಾರ್ಯ ವೈಖರಿಯನ್ನು ನೋಡಲು ಅವರನ್ನು ಸುವರ್ಣ ಸೌಧಕ್ಕೆ ಆಗಮಿಸಿ ಸಂತಸ ವ್ಯಕ್ತಪಡಿಸಿದ್ದಾರೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಇಂದು ಅವರು ಸುವರ್ಣಸೌಧದ ಮುಂಭಾಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂಪಾಯಿ ಹಾಕುವ ಯೋಜನೆಯು ನಮ್ಮ ಕನಸಿನ ಕೂಸಾಗಿತ್ತು. ಈ ಯೋಜನೆಯು ರಾಜ್ಯಾದ್ಯಂತ ಯಶಸ್ಸು ಕಂಡಿದೆ. ಈ ಹಣದಿಂದ ರಾಜ್ಯದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಜನರಿಗೆ ಅನುಕೂಲವಾಗಿದೆ. ಗ್ರಂಥಾಲಯ, ರೈತರ ಒಕ್ಕಲುತನಕ್ಕೆ ಎತ್ತು, ಬೋರ್‍ವೆಲ್ ಕೊರೆಯುವುದು, ರಥವನ್ನು ತಯಾರಿಸುವುದು, ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುವುದರ ಜೊತೆಗೆ ಅತ್ತೆಯ- ಮಾವಂದಿರ ಕಣ್ಣಿನ ಆಪರೇಷನ್ ಮಾಡಿಸುವಷ್ಟು ಈ ಯೋಜನೆಯು ಸಫಲತೆ ಕಂಡಿದೆ” ಎಂದು ಸಂತಸ ವ್ಯಕ್ತಪಡಿಸಿದರು. ಸಮಾಜದ ಪ್ರತಿಯೊಂದು ಸ್ಥರದ ಮಹಿಳೆಯರೂ ಸಹ ಇಂದಿನ ಈ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ವಿಧಾನಸಭೆಯ ಕಾರ್ಯ ಕಲಾಪ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಎಲ್ಲ ಸೆಕ್ರೆಟರಿಗಳ ಕಚೇರಿಗೆ ಗೃಹಲಕ್ಷ್ಮೀಯರು ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಲಿದ್ದಾರೆ” ಎಂದು ಮಾಹಿತಿ ನೀಡಿದ ಹೆಬ್ಬಾಳ್ಕರ್” ನಮ್ಮ ರಾಜ್ಯದ ಮುಖ್ಯಮಂತ್ರಿಯವರು ಬಸವಣ್ಣನವರ ತತ್ವದ ಆಧಾರದ ಮೇಲೆ ಆಡಳಿತವನ್ನು ನಡೆಸುತ್ತಿದ್ದಾರೆ” ಎಂದು ಹೇಳಿದರು.










