ಸಿಎಂ ವಿರುದ್ಧ ಮುಡಾ ಹಗರಣಕ್ಕೆ ಟ್ವಿಸ್ಟ್, ದೂರು ಹಿಂಪಡೆಯಲು ಸ್ನೇಹಮಯಿ ಕೃಷ್ಣಗೆ ಆಮಿಷ ಆರೋಪ.

44

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದಿದ್ದ 14 ನಿವೇಶನ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣಗೆ ತಮ್ಮ ಹೋರಾಟ ನಿಲ್ಲಿಸಲು ಹಣಕಾಸಿನ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಎಂ ಪತ್ನಿ ಪಾರ್ವತಿ ಆಪ್ತ ಸಹಾಯಕನ ಹೆಸರಿನಲ್ಲಿ ತಮಗೆ ಆಮಿಷ ಒಡ್ಡಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆ ಒಳಪಡಿಸುವ ಅರ್ಜಿಯನ್ನು ವಾಪಸ್ ಪಡೆಯಲು ಹಣದ ಅಮಿಷ ನೀಡಲಾಗಿದೆ. ಪತ್ರಕರ್ತನೊಬ್ಬನ ಜೊತೆ ಬಂದು ವ್ಯವಹಾರ ಕುದುರಿಸಲು ಯತ್ನಿಸಿ ಇದಕ್ಕೆ ಸ್ನೇಹಮಯಿ ಕೃಷ್ಣ ಒಪ್ಪದ ಹಿನ್ನಲೆಯಲ್ಲಿ ಅವರ ಪತ್ನಿ ಹಾಗೂ ಮಗನ ಕಡೆಯಿಂದಲೂ ಒತ್ತಡ ಹಾಕಿಸಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೈಸೂರಿನ ಬಿಜೆಪಿ ಮುಖಂಡ ಹರ್ಷ ತಾನು ಪಾರ್ವತಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡಿದ್ದಾರೆ. ಮೈಸೂರಿನ ಸ್ಥಳೀಯ ವಾಹಿನಿಯ ಪತ್ರಕರ್ತ ಶ್ರೀನಿಧಿ ಇವರನ್ನು ಸ್ನೇಹಮಹಿ ಕೃಷ್ಣ ಬಳಿಗೆ ಕರೆದುಕೊಂಡು ಬಂದಿದ್ದಾರೆ. ಹೀಗಾಗಿ ಇವರಿಬ್ಬರ ಮೇಲೆ ಈಗ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯ ಸೇರಿದಂತೆ ಫೋನ್ ಕರೆ ಮಾಡಿರುವ ಸಾಕ್ಷಿಯನ್ನು ನೀಡಿದ್ದಾರೆ.