ಚಂದ್ರಯಾನ-3 ಉಡಾವಣೆ ಯಶಸ್ವಿ-ಅಭಿನಂದನೆ ಸಲ್ಲಿಸಿದ ಮೋದಿ, ಸಿದ್ದು.

56
firstsuddi

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಐಎಸ್‍ಆರ್‍ಓ) ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆ ಯಶಸ್ವಿಯಾಯಿತು. ಇಸ್ರೋ ಸಾಧನೆಗೆ ದೇಶದ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಚಂದ್ರಯಾನ-3 ಭಾರತದ ಬಾಹ್ಯಾಕಾಶ ಸಾಹಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಇದು ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಎತ್ತರಕ್ಕೆ ಏರಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಚೈತನ್ಯ ಮತ್ತು ಜಾಣ್ಮೆಗೆ ನನ್ನ ಅಭಿನಂದನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಚಂದ್ರಯಾನ-3 ಮಿಷನ್ ಯಶಸ್ವಿ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು. ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಮತ್ತು ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಹೊಸ ಮೈಲಿಗಲ್ಲು. ಈ ಸಾಧನೆಯು ಭಾರತದ ಯುವ ಮನಸ್ಸುಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡಲು ಪ್ರೇರೇಪಿಸುತ್ತದೆ ಎಂದು ಅಭಿನಂದಿಸಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಲ್ಯಾಂಡರ್ (ವಿಕ್ರಮ್), ರೋವರ್ (ಪ್ರಜ್ಞಾನ) ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿತು. ಮಧ್ಯಾಹ್ನ 2:35 ನಿಮಿಷಕ್ಕೆ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತು. ಚಂದ್ರಯಾನ-3, ಮೂರು ಪ್ರಮುಖ ಘಟಕಗಳನ್ನು ಹೊಂದಿರುತ್ತದೆ. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್. ಇದು ಚಂದ್ರನ ವಾತಾವರಣದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಚಂದ್ರಯಾನ-2 ರ ಆರ್ಬಿಟರ್ ಅನ್ನು ಬಳಸುತ್ತದೆ.

ಭಾರತದ ಚಂದ್ರಯಾನ-3 ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಡೀ ರಾಷ್ಟ್ರದ ಭರವಸೆಯನ್ನು ಹೊತ್ತು ಸಾಗಿದೆ. ಈ ಕಾರ್ಯಾಚರಣೆಯು ಯಶಸ್ವಿಯಾದರೆ, ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ನಿಯಂತ್ರಿತ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶವಾಗಿ ಭಾರತ ಹೆಸರಾಗಲಿದೆ.

ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಮಾರ್ಕ್-3 ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಇದೆ. ಗಗನನೌಕೆಯು ಭೂಮಿಯಿಂದ ಚಂದ್ರನೆಡೆಗೆ ತಲುಪಲು ಸುಮಾರು 40 ದಿನ ತೆಗೆದುಕೊಳ್ಳುತ್ತದೆ. ಆಗಸ್ಟ್ 23 ರಂದು ಚಂದ್ರನಲ್ಲಿ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಲ್ಯಾಂಡಿಂಗ್ ನಂತರ ಇದು ಒಂದು ಚಂದ್ರನ ದಿನಕ್ಕೆ ಕಾರ್ಯನಿರ್ವಹಿಸುತ್ತದೆ. ಅಂದರೆ ಸರಿಸುಮಾರು 14 ಭೂಮಿಯ ದಿನಗಳು. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ.