ಹಾಸನ: ಜಿಲ್ಲೆಗೆ ಕೆಲಸ ಹುಡುಕಿಕೊಂಡು ಬಂದಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಮಲಗಿದ್ದಲ್ಲಿಯೇ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶದ ನಯನ್‌ಪುರ ಗ್ರಾಮದ ರಾಮ್ ಸಂಜೀವನ್ (30) ಹಾಗೂ ನವಾಬ್ (24) ಮೃತ ದುರ್ದೈವಿಗಳು. ವಾರದ ಹಿಂದೆ ಹಾಸನಕ್ಕೆ ಬಂದಿದ್ದ ರಾಮ್ ಸಂಜೀವನ್ ಹಾಗೂ ನವಾಬ್ ಹನುಮಂತಪುರದಲ್ಲಿ ಬಾಡಿಗೆ ರೂಂ ಪಡೆದು ನಗರದ ಹೊರವಲಯದ ಖಾಸಗಿ ಕಂಪನಿಯಲ್ಲಿ ಎರಡು ದಿನ ಕೆಲಸ ಮಾಡಿದ್ದರು. ಬಳಿಕ ಇಬ್ಬರಿಗೂ ವಿಪರೀತ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲಸಕ್ಕೆ ರಜೆ ಹಾಕಿ ಗುರುವಾರ ಇಬ್ಬರೂ ಖಾಸಗಿ ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಬಂದು ರಾತ್ರಿ ಊಟ ಮಾಡಿ ಮಲಗಿದ್ದರು.
ನಿನ್ನೆ ಇಡೀ ದಿನ ರೂಂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಮನೆ ಮಾಲೀಕರು ರೂಂ ಬಾಗಿಲು ಒಡೆದು ನೋಡಿದಾಗ ಮಲಗಿದ್ದಲ್ಲಿಯೇ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ. ಇದರಿಂದ ಗಾಬರಿಗೊಂಡ ಮನೆ ಮಾಲೀಕ ಕೂಡಲೇ ಹಾಸನ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಇನ್ನೂ ಯುವಕರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.










