ಚಾಮರಾಜನಗರ : ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲ್ಲರ್ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸುವರ್ಣಾವತಿ ಜಲಾಶಯ ಸಮೀಪದ ಗುಡಿಬೋರೆ ಎಂಬಲ್ಲಿ ನಡೆದಿದೆ. ಮೃತರನ್ನು ಸುಬ್ರಹ್ಮಣ್ಯ(65), ಅಮರಾವತಿ(55) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಮೃತರು ತಮ್ಮ ಕುಟುಂಬ ಸಮೇತರಾಗಿ ಟೆಂಪೋ ಟ್ರಾವೆಲ್ಲರ್‍ನಲ್ಲಿ ತಮಿಳುನಾಡಿನ ತಿರುಪೂರಿನಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದ್ದು, ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದು, ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










