ಚಿಕ್ಕಬಳ್ಳಾಪುರ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಸಾವು- ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ.

60
firstsuddi

ಬೆಂಗಳೂರು: ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಚಿಕ್ಕಬಳ್ಳಾಪುರದ ಚಿತ್ರಾವತಿ ಸಮೀಪ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮೃತ ದುರ್ದೈವಿಗಳ ಕುಟುಂಬಗಳಿಗೆ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಮುಂಜಾನೆ ರಸ್ತೆಯ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ 13 ಮಂದಿ ಸಾವಿಗೀಡಾಗಿದ್ದರು. ಆಂಧ್ರಪ್ರದೇಶ ನೋಂದಣಿಯ ಟಾಟಾ ಸುಮೋ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿತ್ತು.

ಈ ದುರ್ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಂದು ಬೆಳಗ್ಗೆ ಅತಿಯಾದ ಮಂಜು ಇತ್ತು. ಈ ಕಾರಣಕ್ಕೆ ಚಾಲಕನಿಗೆ ರಸ್ತೆ ಕಾಣಿಸದೆ ನಿಂತಿದ್ದ ಟ್ಯಾಂಕರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.

ಮೃತರು ಆಂಧ್ರದ ಗೊರೆಂಟ್ಲ ಮೂಲದವರಾಗಿದ್ದು, ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದರು. ದಸರಾ ಹಬ್ಬಕ್ಕೆ ಗೊರೆಂಟ್ಲ ಗ್ರಾಮಕ್ಕೆ ತೆರಳಿದ್ದ ಇವರು ಹಬ್ಬ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.