ಚಿಕ್ಕಮಗಳೂರು:ರಾತ್ರಿ ರಿಸೆಪ್ಷನ್‍ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆ

308

ಚಿಕ್ಕಮಗಳೂರು  : ರಾತ್ರಿ ರಿಸೆಪ್ಷನ್‍ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆಯಾಗಿ, ಮಧುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದ ಅಪರೂಪದ ಮದುವೆಗೆ ಜಿಲ್ಲೆಯ ತರೀಕೆರೆ ಸಾಕ್ಷಿಯಾಗಿದೆ. ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಅಣ್ಣತಮ್ಮಂದಿರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಿಂದ ಹೆಣ್ಣು ತಂದಿದ್ದರು. ಅಶೋಕ್ ಮದುವೆ ದಾವಣಗೆರೆ ಮೂಲದ ಯುವತಿಯೊಂದಿಗೆ ಮುಗಿದಿದೆ. ಆದರೆ, ನವೀನ್ ಮದುವೆಯಾಗಬೇಕಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸರಪನಹಳ್ಳಿಯ ಯುವತಿ ಸಿಂಧುವನ್ನ ಛತ್ರದಲ್ಲೇ ನೋಡಿ ಬೆಂಗಳೂರಿನ ಬಿ.ಎಂ.ಟಿ.ಸಿ. ಕಂಡಕ್ಟರ್ ಚಂದ್ರು ಎಂಬುವರು ಮದುವೆಯಾಗಿದ್ದಾರೆ. ಯಾಕಂದ್ರೆ, ನಿನ್ನೆ ರಾತ್ರಿ ಸಿಂಧು ಜೊತೆ ರಿಸೆಪ್ಷನ್‍ನಲ್ಲಿದ್ದ ನವೀನ್ ಇಂದು ಬೆಳಗ್ಗೆ ನಾಪತ್ತೆಯಾಗಿದ್ದ. ನವೀನ್ ಪ್ರೀತಿಸುತ್ತಿದ್ದ ಯುವತಿ ನನ್ನನ್ನ ಪ್ರೀತಿಸಿ ಬೇರೆ ಹುಡುಗಿಯನ್ನ ಮದುವೆಯಾಗಲು ಬಿಡಲ್ಲ. ನಾನು ಛತ್ರದಲ್ಲೇ ವಿಷ ಕುಡಿಯುತ್ತೇನೆ, ಮದುವೆ ನಿಲ್ಲಿಸುತ್ತೇನೆ ಎಂದು ಹೆದರಿಸಿದ್ದಕ್ಕೆ ವರ ನವೀನ್ ಛತ್ರದಿಂದಲೇ ನಾಪತ್ತೆಯಾಗಿ ಪ್ರೀತಿಸುತ್ತಿದ್ದ ಯುವತಿಗೆ ತುಮಕೂರಿಗೆ ಬರಲು ಹೇಳಿದ್ದ. ಆ ಹೊತ್ತಿಗೆ ಮದುವೆ ನಿಂತಿತ್ತು. ಆಗ ದೋರನಾಳು ಗ್ರಾಮದ ಪಕ್ಕದ ನಂದಿ ಗ್ರಾಮದ ಯುವಕ ಚಂದ್ರು ಮಧುಮಗಳಾಗಿ ನಿಂತಿದ್ದ ಸಿಂಧು ಕೈಹಿಡಿದಿದ್ದಾನೆ. ಚಂದ್ರು ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ನಾಪತ್ತೆಯಾದ ಯುವಕನನ್ನ ಪೋಷಕರು ಹುಡುಕಾಟ ನಡೆಸಿದರು ಸಿಕ್ಕಿಲ್ಲ. ಪ್ರೀತಿಸಿದ ಯುವತಿಗೆ ನವೀನ್ ತುಮಕೂರಿಗೆ ಬಾ ಎಂದಿದ್ದರಿಂದ ಅಲ್ಲಿಗೆ ಹೋಗಿ ನೋಡಿದರೂ ಆತ ಸಿಕ್ಕಿಲ್ಲ. ಆತನ ಮೊಬೈಲ್ ಟ್ರ್ಯಾಕ್ ಬೆಂಗಳೂರು ತೋರಿಸಿದ್ದರಿಂದ ಆತ ಸಿಕ್ಕಿಲ್ಲ. ಆದರೆ, ಹಸೆಮಣೆ ಏರಬೇಕಿದ್ದ ಯುವತಿಗೆ ಮದುವೆ ನಿಲ್ಲುವ ಆತಂಕ ಎದುರಾಗಿತ್ತು. ಆದರೆ, ಮದುವೆ ನಿಲ್ಲದೆ ಛತ್ರದಲ್ಲೇ ಮತ್ತೋರ್ವ ಯುವಕ ಚಂದ್ರು ನಾನೇ ಮದುವೆಯಾಗುತ್ತೇನೆಂದು ವಿವಾಹವಾಗಿದ್ದಾನೆ.