ಚಿಕ್ಕಮಗಳೂರು : ಕೊರೊನಾ ಸೋಂಕಿತರಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಲಾಕ್ ಡೌನ್ ಆರಂಭವಾದ ದಿನದಿಂದ ರೋಗಿಗಳಿಗೆ ಪ್ರತಿದಿನ ಬಿಸಿನೀರು, ಕಷಾಯ, ಊಟ ಮತ್ತು ಉಪಹಾರವನ್ನು ವಿತರಿಸುತ್ತಿರುವ ಜಿಲ್ಲಾ ಯುವಕಾಂಗ್ರೆಸ್ ಇಂದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನೂ ಆರಂಭಿಸಿತು.
ಜಿಲ್ಲಾ ಕಾಂಗ್ರೆಸ್ ಕಛೇರಿ ಮುಂಭಾಗ ಬೆಳಿಗ್ಗೆ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕೂಡಲೇ ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ ಆಂಬ್ಯುಲೆನ್ಸ್ ಮತ್ತು 20 ವೆಂಟಿಲೇಟರ್‍ಗಳನ್ನು ಮತ್ತು ಜಿಲ್ಲಾ ಕೇಂದ್ರಕ್ಕೆ 100 ವೆಂಟಿಲೇಟರ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸಲಹೆ ಮಾಡಿದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರತಿದಿನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಬಿಸಿನೀರು, ಕಷಾಯ, ಊಟ, ಉಪಹಾರ ವಿತರಿಸುತ್ತಿರುವ ಜಿಲ್ಲಾ ಯುವಕಾಂಗ್ರೆಸ್ ಇದೀಗ ಉಚಿತ ಆಂಬ್ಯುಲೆನ್ಸ್ ಸೇವೆಯನ್ನೂ ಆರಂಭಿಸಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ಯುವಕಾಂಗ್ರೆಸ್ ಕಾರ್ಯಕರ್ತರು ಕೊರೊನಾ ವಾರಿಯರ್ಸ್‍ಗಳಂತೆ ಸೇವೆ ಸಲ್ಲಿಸುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‍ಕುಮಾರ್ ಮಾತನಾಡಿ ಕೊರೊನಾ ಸೋಂಕಿತರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಸದಾ ಸಿದ್ದವಿದೆ ಎಂದು ತಿಳಿಸಿದರು.
ಯುವಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಹೀಲ್ ಷರೀಫ್ ಮಾತನಾಡಿ ಯುವಕಾಂಗ್ರೆಸ್ ನ ರಾಜ್ಯ ಹಿರಿಯ ನೇತಾರ ಮಹಮದ್ ಹ್ಯಾರೀಸ್ ನಲಪಾಡ್ ಅವರು ಜಿಲ್ಲಾ ಘಟಕದ ಮನವಿಗೆ ಸ್ಪಂದಿಸಿ ಆಂಬ್ಯುಲೆನ್ಸ್ ವಾಹನವನ್ನು ನೀಡಿದ್ದು ವಾಹನದಲ್ಲಿ ಎರಡು ಆಕ್ಸಿಜನ್ ಸೇರಿದಂತೆ ರೋಗಿಗಳ ಪ್ರಾಣ ರಕ್ಷಣೆಗೆ ಅಗತ್ಯವಾದ ಎಲ್ಲಾ ಪರಿಕರಗಳಿವೆ ಎಂದು ಹೇಳಿದರು.
ಆಂಬ್ಯುಲೆನ್ಸ್ ಸೇವೆ ಸಂಪೂರ್ಣ ಉಚಿತವಾಗಿದ್ದು ಜಿಲ್ಲಾದ್ಯಂತ ಕೊರೊನಾ ಸೋಂಕಿತರಿಗಷ್ಟೇ ಅಲ್ಲದೇ ಇತರ ರೋಗಿಗಳಿಗೂ ಸೇವೆಯನ್ನು ಒದಗಿಸಲಾಗುವುದು ಎಂದ ಅವರು ವಾಹನದ ಅಗತ್ಯವಿರುವವರು 8277004476 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಯುವಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಆದಿತ್ಯ, ಮುಖಂಡರಾದ ರಸೂಲ್ ಖಾನ್ ಜಾವೀದ್, ಸುಬಾನ್, ಅನಿಲ್, ಅಪ್ಸರ್, ಅಕ್ಮಲ್, ರಫೀಕ್ ಅಹಮದ್ ಹಾಜರಿದ್ದರು.










