ಚಿಕ್ಕಮಗಳೂರು: ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯ…

196
First Suddi

ಚಿಕ್ಕಮಗಳೂರು : ರೈತರ ಬದುಕಿಗೆ ಮಾರಕವಾಗಿರುವ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಇಂದು ಪತ್ರ ಚಳುವಳಿ ನಡೆಸಿದರು.
ಬೆಳಿಗ್ಗೆ ಪ್ರಧಾನ ಅಂಚೆ ಕಛೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಕಛೇರಿಯಿಂದ ಪತ್ರವನ್ನು ಖರೀದಿಸಿ ನೂತನ ಕೃಷಿ ಕಾಯ್ದೆಯನ್ನು ಕೈಬಿಡಿ, ಅನ್ನದಾತರನ್ನು ರಕ್ಷಿಸಿ, ರೈತರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ನಿಲ್ಲಿಸಿ ಎಂದು ಬರೆದು ತಮ್ಮ ರಕ್ತದಲ್ಲಿ ಸಹಿ ಮಾಡಿ ಪ್ರಧಾನ ಮಂತ್ರಿಗೆ ಅಂಚೆ ಮೂಲಕ ರವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಂ.ವಿಜಯ್ ದೇಶದ ರೈತರಿಗೆ ಬೇಡವಾದ ನೂತನ ಕೃಷಿ ಕಾಯ್ದೆ ಕೇಂದ್ರ ಸರ್ಕಾರಕ್ಕೆ ಯಾಕೆ ಬೇಕು ಎಂದು ಪ್ರಶ್ನಿಸಿ ಕೃಷಿಕರ ವಿಷಯದಲ್ಲಿ ಕೇಂದ್ರ ಹಠಮಾರಿ ಧೋರಣೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ನೂತನ ಕಾಯ್ದೆಯನ್ನು ವಿರೋಧಿಸಿ ಮೂರು ತಿಂಗಳಿನಿಂದ ದೇಶದ ರೈತರು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟಾದರೂ ಸಹ ಕಾಯ್ದೆಯನ್ನು ಹಿಂಪಡೆಯದ ಕೇಂದ್ರ ಸರ್ಕಾರ ಅನ್ನದಾತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುವ ಮೂಲಕ ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಯಾವುದೇ ಸಬೂಬು ಹೇಳದೆ ನೂತನ ಕೃಷಿ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು, ಆ ಮೂಲಕ ಅನ್ನದಾತರನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಆಲ್ದೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸಿ.ಸಿ.ಈರೇಗೌಡ, ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶಫೀ ಅಹಮದ್, ಪ್ರದೀಪ್, ಗುರುದೇವ್, ಹಾರೂನ್, ನರೇಂದ್ರ ಹಾಜರಿದ್ದರು.