ಚಿಕ್ಕಮಗಳೂರು : ಗುಂಡಿ ಗೊಟರುಗಳಿಂದ ಸಂಪೂರ್ಣ ಹದಗೆಟ್ಟಿರುವ ತಮ್ಮ ಗ್ರಾಮದ ರಸ್ತೆಯನ್ನು ತಕ್ಷಣ ಅಭಿವೃದ್ದಿ ಪಡಿಸುವಂತೆ ತಾಲ್ಲೂಕಿನ ಹೊಸಪುರದ ಗ್ರಾಮಸ್ತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಡಾ: ಬಗಾದಿ ಗೌತಮ್ ಅವರನ್ನು ಬೇಟಿ ಮಾಡಿದ ಗ್ರಾಮಸ್ತರು ಈ ಸಂಬಂಧ ಮನವಿ ಸಲ್ಲಿಸಿದರು.
ಹಿರೇಕೊಳಲೆಯಿಂದ ತಮ್ಮ ಗ್ರಾಮದವರೆಗಿನ 12 ಕಿ.ಮೀ ರಸ್ತೆ ಗುಂಡಿ ಗೊಟರುಗಳಿಂದ ಕೂಡಿ ಹಲವು ವರ್ಷಗಳಿಂದ ಹಾಳಾಗಿದೆ, ರಸ್ತೆಯ ಮೇಲೆ ದೊಡ್ಡ ದೊಡ್ಡ ಕಂದಕಗಳು ಬಿದ್ದಿವೆ, ಮಳೆಯ ನೀರು ರಸ್ತೆಯ ಮೇಲೆ ನಿಂತಿದೆ. ಆಳುದ್ದದ ಗುಂಡಿಗಳ ಮೇಲೆ ಜನ ಜಾನುವಾರು ಮತ್ತು ವಾಹನಗಳು ಸಂಚರಿಸಲಾಗದೇ ಪರದಾಡುವಂತಾಗಿದೆ, ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಅಳಲು ತೋಡಿಕೊಂಡರು.
ಗ್ರಾಮಕ್ಕೆ ಬರುತ್ತಿದ್ದ ಬಸ್‍ಗಳು ಹದಗೆಟ್ಟ ರಸ್ತೆಯಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಿದ್ದು ಇದರಿಂದಾಗಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ನಗರಕ್ಕೆ ನಡೆದು ಬರುವ ಪರಿಸ್ಥಿತಿ ತಲೆದೋರಿದೆ. 8 ವರ್ಷಗಳ ಹಿಂದೆ ಹಾಕಿದ್ದ ಡಾಂಬರ್ ಸಂಪೂರ್ಣ ಕಿತ್ತುಹೋಗಿದೆ ಎಂದು ದೂರಿದರು.
ಗ್ರಾಮದಲ್ಲಿ 300ಕ್ಕೂ ಹೆಚ್ಚು ಪ.ಜಾತಿ ಪ.ವರ್ಗದವರಿದ್ದು ಅವರಿಗೆ ಸಂತೆ, ಆಸ್ಪತ್ರೆ, ಸೇರಿದಂತೆ ಯಾವುದೇ ಕೆಲಸಗಳಿಗೂ ನಗರಕ್ಕೆ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು ಈ ಹಿನ್ನಲೆಯಲ್ಲಿ ತಕ್ಷಣ ಗ್ರಾಮದ ರಸ್ತೆಯನ್ನು ದುರಸ್ಥಿ ಪಡಿಸುವಂತೆ, ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ ರಾಧಾಕೃಷ್ಣ, ಗ್ರಾಮಸ್ಥರಾದ ಹೆಚ್.ಆರ್ ಪುಟ್ಟಸ್ವಾಮಿ, ಆರ್ ವಸಂತ, ಹೆಚ್.ಎಂ ಸುರೇಶ್, ಚಂದ್ರಶೇಖರ್, ವಿಶ್ವನಾಥ್, ಮಲ್ಲಯ್ಯ, ಹೆಚ್.ಎಸ್ ಸುಧಾ, ಸರಸ್ವತಿ, ಮಂಜುಳ, ಸಿದ್ದಮ್ಮ, ಮಂಜುನಾಥ್, ಪ್ರವೀಣ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಗುಂಡಿ ಗೊಟರುಗಳಿಂದ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ದಿ ಪಡಿಸುವಂತೆ ಜಿಲ್ಲಾಧಿಕಾರಿಗೆ ಹೊಸಪುರ ಗ್ರಾಮಸ್ತರ ಮನವಿ…










