ಚಿಕ್ಕಮಗಳೂರು : ಮುಂಬರುವ ದಿನಗಳಲ್ಲಿ ಒದಗಬಹುದಾದ ನೀರಿನ ಬರವನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಿನಿಂದಲೇ ಪ್ರತಿಯೊಬ್ಬರೂ ಜಲ ಸಂರಕ್ಷಣೆಗೆ ಮುಂದಾಗಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ,ಎಲ್ ಮೂರ್ತಿ ಸಲಹೆ ಮಾಡಿದರು.
ಶಿವರಾಂ ಸೇವಾ ಟ್ರಸ್ಟ್ ಇಲ್ಲಿನ ನೆಹರು ನಗರದಲ್ಲಿ ಸ್ಥಾಪಿಸಿರುವ ಹಂಸ ಶುದ್ದ ನೀರಿನ ಘಟಕವನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮನುಷ್ಯನ ದುರಾಸೆಯಿಂದಾಗಿ ಅರಣ್ಯ ಮತ್ತು ಹಸಿರು ಪರಿಸರ ನಾಶವಾಗಿದೆ, ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಬರ ಎದುರಾಗುತ್ತದೆ, ಹನಿ ನೀರಿಗಾಗಿ ಜನ ಬಡಿದಾಡುವ ಕಾಲ ಬರುತ್ತದೆ ಎಂದರು.
ಆ ಪರಿಸ್ಥಿತಿ ಎದುರಾಗುವ ಮುನ್ನ ಎಲ್ಲರೂ ಎಚ್ಚೆತ್ತುಕೊಳ್ಳಬೇಕು, ಗಿಡ,ಮರ ಮತ್ತು ಕಾಡನ್ನು ಬೆಳೆಸಬೇಕು, ನೀರನ್ನು ಮಿತವಾಗಿ ಬಳಸಬೇಕು. ಪ್ರತಿ ಹನಿ ನೀರನ್ನೂ ಉಳಿಸಲು ಮುಂದಾಗಬೇಕು ಎಂದ ಅವರು ಮುಂದಿನ ಜನಾಂಗಕ್ಕೆ ನಾವು ನೀರನ್ನು ಉಳಿಸದಿದ್ದಲ್ಲಿ ನಮ್ಮ ಕಣ್ಣ ಮುಂದೆಯೇ ನಮ್ಮವರು ನೀರಿಲ್ಲದೆ ಸಾಯುವುದನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಹೆಚ್,ಎಲ್ ಶೇಖರಪ್ಪ ಮಾತನಾಡಿ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಒದಗಿಸಲು ಮುಂದಾಗಿರುವುದು ಪುಣ್ಯದ ಕೆಲಸ, ಇದು ಇತರರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಟ್ರಸ್ಟ್ನ ಅಧ್ಯಕ್ಷ ಸಿ.ಟಿ ಶಿವರಾಂ ಮಾತನಾಡಿ ಸುತ್ತಮುತ್ತಲ ಜನರಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು. ಇದರಿಂದ ಬರುವ ಲಾಭದಲ್ಲಿ ಶೇ40ರಷ್ಟು ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ಕಡೂರು ತಾಲ್ಲೂಕು ನೇಕಾರರ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ದಿನೇಶ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ನೀರಿನ ಬರವನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಿನಿಂದಲೇ ಪ್ರತಿಯೊಬ್ಬರೂ ಜಲ ಸಂರಕ್ಷಣೆಗೆ ಮುಂದಾಗಬೇಕು :...










