ಚಿಕ್ಕಮಗಳೂರು : ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಬೆಂಕಿ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಪಟಾಕಿ ನಿಷೇಧಿಸುವಂತೆ ಬಹುಜನ ಸಮಾಜ ಪಕ್ಷ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಅವರನ್ನು ಇಂದು ಭೇಟಿ ಮಾಡಿದ ಪಕ್ಷದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ ಪಟಾಕಿ ಬದಲು ದೀಪ ಹಚ್ಚುವ ವ್ಯವಸ್ಥೆ ಜಾರಿಗೆ ತರುವಂತೆ ಸಲಹೆ ನೀಡಿದರು.
ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಲಾಗುತ್ತಿದೆ, ಇದರಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಜಿಲ್ಲೆಯ ಜನತೆಯ ಆರೋಗ್ಯ ಹಾಳಾಗುತ್ತಿದೆ ಎಂದು ಹೇಳಿದರು.
ಪ್ರತಿವರ್ಷ ಪಟಾಕಿ ಸಿಡಿಸುವ ವೇಳೆ ಅನಾಹುತ ಸಂಭವಿಸಿ ರಾಜ್ಯಾದ್ಯಂತ ಸಾವಿರಾರು ಮಕ್ಕಳು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ಬಹಳಷ್ಟು ಜನ ಕಣ್ಣು ಮತ್ತು ಅಂಗಾಂಗಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಪಟಾಕಿ ತಯಾರಿಸುವ ಕಂಪನಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಮತ್ತು ಮಕ್ಕಳು ದುಡಿಯುತ್ತಿದ್ದು, ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ದೀಪಾವಳಿಯ ಜೊತೆಗೆ ಬಹುತೇಕ ಶುಭಕಾರ್ಯ ಸೇರಿದಂತೆ ಎಲ್ಲಾ ಕಾರ್ಯಗಳಲ್ಲೂ ಪಟಾಕಿ ಸಿಡಿಸಲಾಗುತ್ತಿದೆ ಇದರಿಂದಾಗಿ ಸಾರ್ವಜನಿಕರ ಹಣ ಪೋಲಾಗುವುದರ ಜೊತೆಗೆ ಅನೇಕ ರೋಗ ರುಜಿನಗಳು ಸಮಾಜವನ್ನು ಕಾಡುತ್ತಿವೆ ಎಂದು ತಿಳಿಸಿದರು.
ಇವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಪಟಾಕಿ ನಿಷೇಧಿಸಬೇಕು ಅದರ ಬದಲಿಗೆ ಮನೆ ಮುಂದೆ ದೀಪ ಹಚ್ಚುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ತಾಲ್ಲೂಕು ಸಂಯೋಜಕಿ ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಮುಖಂಡರಾದ ನವೀನ್, ವಿನೀತ್, ರವಿಕುಮಾರ್, ಗಣೇಶ್, ರಾಘವೇಂದ್ರ, ಕನ್ನಡಸೇನೆಯ ಶಂಕರೇಗೌಡ, ಆದಿ ಹಾಜರಿದ್ದರು.










