ಚಿಕ್ಕಮಗಳೂರು : ಬಾರ್ ಓಪನ್ ಆಗಿದೆ ಎಂದು ಎಣ್ಣೆಗೆ ಮುಗಿಬಿದ್ದ ಜನ, ಮಧ್ಯ ಪ್ರಿಯರಿಗೆ ತಿಳಿಹೇಳಿ ಗುಂಪು ಚದುರಿಸಿದ ಪೊಲೀಸರು…

524

ಚಿಕ್ಕಮಗಳೂರು : ಪೊಲೀಸರು ಕಳ್ಳತನವಾದ ಮದ್ಯದಂಗಡಿಯ ಸ್ಥಳಪರಿಶೀಲನೆಗೆ ಬರುತ್ತಿದ್ದಂತೆ ಬಾರ್ ಓಪನ್ ಆಗಿದ್ದನ್ನು ಕಂಡು ಬೆಳ್ಳಂಬೆಳಗ್ಗೆಯೇ ಬಾರ್ ಮುಂದೆ ನೂರಾರು ಜನ ಜಮಾಯಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಬಳಿ ನಡೆದಿದೆ. ಜನ ಎಷ್ಟರ ಮಟ್ಟಿಗೆ ಎಣ್ಣೆ-ಎಣ್ಣೆ ಅಂತಿದ್ದಾರೆ ಅಂದರೆ, ಬೆಳಗ್ಗೆದ್ದು ದೇವರ ಮುಖ ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ. ಎಣ್ಣೆ ಅಂಗಡಿ ಓಪನ್ ಆಗುತ್ತಾ, ಮುಖ್ಯಮಂತ್ರಿ ಏನಾದರು ಹೇಳುತ್ತಾರಾ ಅಂತ ಟಿವಿ ಹಾಕುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಯಗಟಿ ಬಳಿ ಓರ್ವ ವ್ಯಕ್ತಿ ಎಣ್ಣೆ ಅಂಗಡಿ ಓಪನ್ ಆಗಿದೆ ಎಂದು ಸ್ನೇಹಿತರಿಗೆ ಹೇಳಿದ್ದೇ ತಡ. ಎದ್ವೋ-ಬಿದ್ವೋ ಅಂತ ಯಗಟಿ ಸುತ್ತಮುತ್ತಲಿನ ಜನ ಬೆಳ್ಳಂಬೆಳಗ್ಗೆಯೇ ನೂರಾರು ಜನ ಬಾರ್ ಮುಂದೆ ಜಮಾಯಿಸಿದ್ದರು. ಸ್ಥಳಕ್ಕೆ ಬಂದ ಮದ್ಯಪ್ರಿಯರಿಗೆ ಪೊಲೀಸರು, ಅಯ್ಯೋ ಪುಣ್ಯಾತ್ಮರ ಬಾರ್ ಓಪನ್ ಆಗಿಲ್ಲ, ನಿನ್ನೆ ರಾತ್ರಿ ಬಾರ್ ಕಳ್ಳತನವಾಗಿದೆ. ಸ್ಪಾಟ್ ಮಹಜರಿಗೆ ಬಂದಿದ್ದೇವೆ. ಮೇ 15ರತನಕ ಬಾರ್ ಕಡೆ ಬರಬೇಡಿ ಎಂದು ತಿಳಿ ಹೇಳಿ ವಾಪಸ್ ಕಳುಹಿಸಿದ್ದಾರೆ. ಎಣ್ಣೆ ಆಸೆಯಿಂದ ಬಂದ ಮದ್ಯಪ್ರಿಯರು ಬಂದ ದಾರಿಗೆ ಸುಂಕವಿಲ್ಲ ಎಂದು ಹ್ಯಾಪ್ಮೊರೆ ಹಾಕಿಕೊಂಡು ವಾಪಸ್ ಹೋಗಿದ್ದಾರೆ.