ಮೂಡಿಗೆರೆ : ಕೊರೊನಾ ಭೀತಿ ನಡುವೆ ಭಾರತೀಬೈಲ್ ಗ್ರಾಮದಲ್ಲಿ ಕಾಣಿಸಿಕೊಂಡ ಹೊಟ್ಟೆನೋವು-ಗ್ರಾಮಸ್ಥರಲ್ಲಿ ಆತಂಕ…

1098
firstsuddi

ಕೊಟ್ಟಿಗೆಹಾರ : ಕೊರೊನಾ ಭೀತಿ ನಡುವೆ ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಭಾರತಿಬೈಲ್ ಗ್ರಾಮದಲ್ಲಿ 50 ಕ್ಕೂ ಹೆಚ್ಚು ಮಂದಿಗೆ ಹೊಟ್ಟೆನೋವು, ಬೇದಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ತಾಲ್ಲೂಕು ವೈದ್ಯಾದಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳದೆ ಮೂರು ದಿನಗಳಿಂದ ಗ್ರಾಮದ ಕೆಲವರಿಗೆ ಹೊಟ್ಟೆನೋವು, ಬೇದಿ ಕಾಣಿಸಿಕೊಂಡಿದ್ದು ಇಂದು ಗ್ರಾಮದಲ್ಲಿ ಹಲವರಿಗೆ ಹೊಟ್ಟೆನೋವು, ಬೇದಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇಂದಿನವರೆಗೆ ಭಾರತಿಬೈಲಿನ ಪ್ರಾಥಮಿಕ ಆರೋಗ್ಯಕ್ಕೆ 30 ಕ್ಕೂ ಹೆಚ್ಚು ಮಂದಿ ಹೊಟ್ಟೆನೋವು ಮತ್ತು ಬೇದಿಗೆ ಚಿಕಿತ್ಸೆ ಪಡೆದಿದ್ದಾರೆ.
ಗ್ರಾಮದಲ್ಲಿ ಏಕಕಾಲದಲ್ಲಿ ಹಲವರಿಗೆ ಹೊಟ್ಟೆನೋವು, ಬೇದಿ ಕಾಣಿಸಿಕೊಂಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕುಡಿಯುವ ನೀರಿನಿಂದ ಈ ರೀತಿ ಆಗಿರಬಹುದು ಎನ್ನಲಾಗಿದ್ದು, ವೈದ್ಯರು ಪ್ರಯೋಗಾಲಯಕ್ಕೆ ಕುಡಿಯುವ ನೀರಿನ ಮಾದರಿಯನ್ನು ಕಳುಹಿಸಿದ್ದು ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ.

ಭಾರತಿಬೈಲಿನ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಹೊಟ್ಟೆನೋವು ಮತ್ತು ಬೇದಿಯಿಂದ ಬಳಲುತ್ತಿರುವವರ ಮನೆಗಳಿಗೆ ತಾಲ್ಲೂಕು ಆರೋಗ್ಯಧಿಕಾರಿ ಸುಂದರೇಶ್, ವೈದ್ಯಾಧಿಕಾರಿ ಮಧುಸೂಧನ್, ಬಿ ಹೊಸಳ್ಳಿ ಗ್ರಾ.ಪಂ ಅಧ್ಯಕ್ಷ ರವಿಗೌಡ ಬೇಟಿ ನೀಡಿ ಮಾಹಿತಿ ಪಡೆದರು.
ವೈದ್ಯಾಧಿಕಾರಿ ಮಧುಸೂಧನ್ ಮಾತನಾಡಿ ಗ್ರಾಮ ವ್ಯಾಪ್ತಿಯ ಕುಡಿಯುವ ನೀರಿನ ಟ್ಯಾಂಕ್‍ನ್ನು ವಾರಕ್ಕೆ 2 ಬಾರಿ ಬ್ಲಿಚಿಂಗ್ ಪೌಡರ್ ಹಾಕಿ ಸ್ವಚ್ಚಗೊಳಿಸಲು ಸೂಚಿಸಲಾಗಿದೆ. ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರಲು 36 ಗಂಟೆ ಬೇಕಾಗಿದೆ. ಮೇಲ್ನೋಟಕ್ಕೆ ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಕಂಡು ಬಂದಿದ್ದು ವರದಿಯ ನಂತರ ಸತ್ಯಾಂಶ ಹೊರಬರಲಿದೆ ಎಂದರು.
ಗ್ರಾಮದ ಸುಮಾರು 250 ಮನೆಗಳಿಗೆ 5 ಸಾವಿರ ಹಾಲೋಜಿನ್ ಮಾತ್ರೆಗಳನ್ನು ವಿತರಿಸಲಾಗಿದ್ದು ಈ ಮಾತ್ರೆಗಳನ್ನು 20 ಲೀಟರ್ ನೀರಿಗೆ 1 ಮಾತ್ರೆಯನ್ನು ಹಾಕಿ ಸೇವಿಸಬೇಕು. ಬುಧವಾರ ರೋಗದಿಂದ ಬರಳುತ್ತಿರುವವರ ಮಲ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದರು.
ಗ್ರಾಮಸ್ಥ ಶಿವಪ್ರಸಾದ್ ಮಾತನಾಡಿ ಮಂಗಳವಾರದಿಂದ ನನಗೆ ಹೊಟ್ಟೆನೋವು ಪ್ರಾರಂಭವಾಗಿದೆ. ಭಾರತಿಬೈಲ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇನೆ. ನಮ್ಮ ಮನೆಯಲ್ಲಿ ಕಾಯಿಸಿ ಆರಿಸಿದ ನೀರನ್ನೆ ಬಳಸುತ್ತೇವೆ. ಗ್ರಾಮದಲ್ಲಿ ಹೊಟ್ಟೆನೋವು, ಬೇದಿ ಹಲವರಿಗೆ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಹುಡುಕಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬಿ ಹೊಸಳ್ಳಿ ಗ್ರಾ.ಪಂ ಅಧ್ಯಕ್ಷ ರವಿಗೌಡ, ಪಿಡಿಓ ಸಮಿವುಲ್ಲಾ ಶರೀಪ್, ಆರೋಗ್ಯ ಇಲಾಖೆಯ ಸಹಾಯಕ ದಿನೇಶ್, ಶುಶೂಶ್ರಕಿ ಹರಿಣಾಕ್ಷಿ, ಪ್ರಮೀಳಾ ಮುಂತಾದವರು ಇದ್ದರು.