ಚಿಕ್ಕಮಗಳೂರು : ಭಗವಂತನ ಮುಖವಾಣಿಯಾದ ಭಗವದ್ಗೀತೆಯ ಪಠಣ ಅಥವಾ ಶ್ರವಣದಿಂದ ಮನುಷ್ಯರಲ್ಲಿ ಉನ್ನತ ಮೌಲ್ಯಗಳು ಮತ್ತು ಜ್ಞಾನ ಬೆಳೆಯುತ್ತವೆ ಎಂದು ವಿ.ಎಚ್.ಪಿ. ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಹೇಳಿದರು.
ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ಗೀತಾ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಗವದ್ಗೀತೆ ಅತ್ಯಂತ ಪವಿತ್ರವಾದ ಗ್ರಂಥ. ಭಗವಂತ ಶ್ರೀಕೃಷ್ಣ ಪರಮಾತ್ಮನಿಂದ ಬೋಧಿಸಲ್ಪಟ್ಟ ಈ ಗೀತೆ ಹಿಂದೂಗಳು ಸೇರಿದಂತೆ ಎಲ್ಲಾ ಧರ್ಮೀಯರಿಗೂ ಆದರ್ಶಪ್ರಾಯವಾಗಿದೆ. ಅದನ್ನು ನಾವು ಓದುವುದರಿಂದ ಅಥವಾ ಕನಿಷ್ಟ ಕೇಳುವುದರಿಂದ ನಮ್ಮಗೆ ಮಾನಸಿಕ ದೃಢತೆ ಶಾಂತಿ, ನೆಮ್ಮದಿ ಲಭಿಸುತ್ತವೆ ಎಂದು ಕಿವಿಮಾತು ಹೇಳಿದರು.
ಭಾರತ್ ಸ್ವಾಭಿಮಾನ್ ಟ್ರಸ್ಟ್ ನ ಜಿಲ್ಲಾ ಪ್ರಭಾರಿ ದಿವಾಕರ ಭಟ್ ಮಾತನಾಡಿ, ಭಗವದ್ಗೀತೆಯನ್ನು ಓದುವುದು ಅಥವಾ ಆಲಿಸುವುವರಿಂದ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಕೆ.ಸಿ.ಶಂಕರ್, ಭಗವದ್ಗೀತೆ ಮಹಾಭಾರತದ ಅವಿಭಾಜ್ಯ ಅಂಗವಾಗಿದೆ. ಅದರಲ್ಲಿರುವ 18 ಅಧ್ಯಾಯಗಳಲ್ಲಿ 700ಕ್ಕೂ ಹೆಚ್ಚು ಶ್ಲೋಕಗಳಿವೆ ಎಂದು ತಿಳಿಸಿದರು.
ಮನುಷ್ಯನಿಗೆ ಜ್ಞಾನ ಮತ್ತು ಮಾನವೀಯ ಮೌಲ್ಯಗಳು ಅತಿ ಮುಖ್ಯ ಅವು ಭಗವದ್ಗೀತೆಯಲ್ಲಿ ದೊರೆಯುತ್ತವೆ ಎಂದ ಅವರು, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಭಗವದ್ಗೀತೆಯ ಶ್ಲೋಕಗಳನ್ನು ಕಲಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳು ಭಗವದ್ಗೀತೆಯ ಶ್ಲೋಕಗಳನ್ನು ಅರ್ಥಸಹಿತವಾಗಿ ಪಠಿಸಿದರು. ಪ್ರಾಂಶುಪಾಲ ವಿ.ಎಸ್.ರಾಘವೇಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಐಶ್ವರ್ಯ ಹಾಗೂ ಸೃಜನ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಂಜಲಿ ಸ್ವಾಗತಿಸಿದರು. ಜೀವನ್ ವಂದಿಸಿದರು.










