ಚಿಕ್ಕಮಗಳೂರು : ಸಿಎಂ ಬೊಮ್ಮಾಯಿ ಪೂರ್ಣಾವಧಿ ಆಡಳಿತ ನಡೆಸಲು ವಿಶೇಷ ಪೂಜೆ ಸಲ್ಲಿಕೆ…

109
firstsuddi

ಚಿಕ್ಕಮಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ಣಾವಧಿ ಆಡಳಿತ ನಡೆಸಲಿ ಎಂದು ಪ್ರಾರ್ಥಿಸಿ ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ನಗರದ ವಿವಿಧ ದೇವಾಲಯಗಳಲ್ಲಿ ಗುರುವಾರ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ ಶ್ರೀ ಬೋಳರಾಮೇಶ್ವರ ದೇವಾಲಯಕ್ಕೆ ತೆರಳಿದ ಸಮಾಜದ ಮುಖಂಡರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ಗಳ ಸ್ಥಾನಕ್ಕೆ ಯಾವುದೇ ಕಂಟಕ ಬಾರದಿರಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಬೊಗಸೆ ಶಿವಶಂಕರ್ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಳ, ಸಜ್ಜನ ಹಾಗೂ ಅನುಭವಿ ರಾಜಕಾರಣಿಯಾಗಿದ್ದು ಉತ್ತಮ ಮತ್ತು ಜನಪರ ಆಡಳಿತ ನೀಡಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿಯ ಹೈಕಮಾಂಡ್ ಸರ್ವ ಸಮ್ಮತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಸಹ ಬೊಮ್ಮಾಯಿ ಅವರ ಆಯ್ಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದ ಅವರು ಈ ಹಿನ್ನೆಲೆಯಲ್ಲಿ ಪೂರ್ಣಾವಧಿ ಅಧಿಕಾರ ಮಾಡಲು ಅವರಿಗೆ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆಗೆ ಮುಂದಾಗಬಾರದು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯಿತ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜವಾದಿ ಚಿಂತನೆಯ ಕುಟುಂಬದಿಂದ ಬಂದವರಾಗಿದ್ದು ಆ ಹಿನ್ನೆಲೆಯಲ್ಲಿ ಅವರಿಂದ ಜನಪರ ಆಡಳಿತವನ್ನು ನಿರೀಕ್ಷಿಸ ಬಹುದು ಎಂದು ತಿಳಿಸಿದರು.

ಉಪಾಧ್ಯಕ್ಷ ಮುಗುಳವಳ್ಳಿ ನಿರಂಜನ್ ಮಾತನಾಡಿ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಉತ್ತಮ ತೀರ್ಮಾನವನ್ನು ಕೈಗೊಂಡಿದೆ ಎಂದು ಹೇಳಿದರು.

ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷ ಹೆಚ್.ಎನ್.ನಂಜೇಗೌಡ, ವೀರಶೈವ ಲಿಂಗಾಯಿತ ಸಮಾಜದ ಕಾರ್ಯದರ್ಶಿ ಸಿ.ಬಿ.ನಂದೀಶ್, ನಿರ್ದೇಶಕರಾದ ಬಿ.ಪಿ.ಜಗದೀಶ್, ಶಶಿಧರ್, ಸಿರಿಮನೆ ಪ್ರಸಾದ್, ಮುರುಗೇಂದ್ರ ಸ್ವಾಮಿ, ಯೋಗೀಶ್, ಅರವಿಂದ್ ಹಾಜರಿದ್ದರು.