ಚಿಕ್ಕಮಗಳೂರು : ಹಣದ ವಿಚಾರಕ್ಕೆ ನಡುರಸ್ತೆಯಲ್ಲೇ ಸಂಬಂಧಿಕರ ಮಾರಾಮಾರಿ…

303
firstsuddi

ಚಿಕ್ಕಮಗಳೂರು : ಸಂಬಳದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಸಂಬಂಧಿಕರು ದೇವಸ್ಥಾನದ ಆವರಣದಲ್ಲಿಯೇ ಹೊಡೆದಾಡಿರುವ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲೆಯ ಲಕ್ಯಾ ಗ್ರಾಮದಲ್ಲಿ ಹಂದಿ ಫಾರಂ ನಡೆಸುತ್ತಿದ್ದ ಧರ್ಮ ಎಂಬುವರ ಫಾರಂನಲ್ಲಿ ಬೆಳವಾಡಿ ಬಳಿಯ ಬೈರಾಪುರದ ವೆಂಕಟೇಶ್ ಹಾಗೂ ಸುಧಾ ದಂಪತಿ ಕೆಲಸ ಮಾಡುತ್ತಿದ್ದರು. ಇವರದ್ದೇ ಗಾಡಿಯಲ್ಲಿ ಫಾರಂಗೆ ಫುಡ್ ತರುವುದು ಸೇರಿದಂತೆ ಇತರೆ ಕೆಲಸ ಮಾಡುತ್ತಿದ್ದರು. ಆದರೆ ಫಾರಂ ಮಾಲೀಕ ಧರ್ಮ ವೆಂಕಟೇಶ್ ದಂಪತಿಗೆ ಆರು ತಿಂಗಳಿಂದ ಸಂಬಳ ನೀಡಿರಲಿಲ್ಲವಂತೆ. ಹಾಗಾಗಿ, ವೆಂಕಟೇಶ್ ಹಣ ಕೇಳಿದಾಗ ನಾಳೆ ಬನ್ನಿ ಹಣ ನೀಡುತ್ತೇನೆಂದು ಹೇಳಿದ್ದಾರೆ. ಹಣಕ್ಕಾಗಿ ವೆಂಕಟೇಶ್ ದಂಪತಿ ನಗರದ ಸಾಲುಮಾರದಮ್ಮ ದೇವಸ್ಥಾನದ ಬಳಿ ಬಂದಾಗ ಹಣದ ವಿಚಾರವಾಗಿ ಇಬ್ಬರ ಮಧ್ಯೆ ಮಾತಿಗೆ-ಮಾತು ಬೆಳೆದು ಹೊಡೆದಾಡಿ, ಎರಡೂ ಕುಟುಂಬದವರೂ ಆಸ್ಪತ್ರೆ ಸೇರಿದ್ದಾರೆ. ನಾನು ಕಳೆದ ಐದು ವರ್ಷದಿಂದ ಧರ್ಮ ಎಂಬುವರ ಫಾರಂನಲ್ಲಿ ಕೆಲಸ ಮಾಡುತ್ತಿದ್ದೆ. ಆರು ತಿಂಗಳಿಂದ ಹಣ ನೀಡಿಲ್ಲ. ಹಣ ಕೇಳಿದ್ದಕ್ಕೆ ನನಗೂ ನನ್ನ ಹೆಂಡತಿಗೂ ಹೊಡೆದಿದ್ದಾರೆಂದು ವೆಂಕಟೇಶ್ ಆರೋಪಿಸಿದ್ದಾರೆ. ಇಬ್ಬರ ಜೊತೆಗೂ ಬಂದಿದ್ದ ಸ್ನೇಹಿತರು ಹಾಗೂ ಸಂಬಂಧಿಕರು ಗಲಾಟೆಯನ್ನು ಬಿಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಎರಡು ಕುಟುಂಬದವರು ಅವರೇ ಹೊಡೆದಿದ್ದು, ಅವರೇ ಹೊಡೆದಿದ್ದು ಎಂದು ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳುತ್ತಿದ್ದಾರೆ. ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಎರಡೂ ಕುಟುಂಬದವರು ಪೊಲೀಸರಿಗೆ ಪ್ರತ್ಯೇಕ ದೂರು ನೀಡಿದ್ದಾರೆ.