ಚಿತ್ರದುರ್ಗ : ಮುರುಘಾ ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ತೃತೀಯ ದಶಮಾನೋತ್ಸವದ ಅಂಗವಾಗಿ ನಿನ್ನೆ ಗುರುವಂದನೆ ಕಾರ್ಯಕ್ರಮ ನೆರವೇರಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ‘ಬಸವ ಭೂಷಣ ಪ್ರಶಸ್ತಿ’ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ‘ಶರಣ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವ ಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಶ್ರೀಗಳ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳೊಂದಿಗೆ ಮಾತನಾಡಿ ಇಂಡಸ್ಟ್ರೀಯಲ್ ಟೌನ್ ಶಿಪ್ ನಿರ್ಮಾಣ ಮಾಡಲು ಸಿದ್ಧನಿದ್ದೇನೆ. ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ 1 ಸಾವಿರದಿಂದ 2 ಸಾವಿರ ಎಕರೆ ಭೂಮಿಯನ್ನು ಗುರುತಿಸಿದರೆ ನಾನು ಈ ಕಾರ್ಯ ಮಾಡಲು ಸಿದ್ಧನಿದ್ದೇನೆ. ಸುವರ್ಣ ಕರ್ನಾಟಕ ಕಟ್ಟಬೇಕು ಎಂಬ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುರುಘಾ ಮಠದ ಮಠಾಧೀಶ ಡಾ.ಶಿವಮೂರ್ತಿ ಮುರುಘಾ ಶರಣರು ಬಸವರಾಜ ಬೊಮ್ಮಾಯಿ ಅವರನ್ನು ಅದೃಷ್ಟವಂತ ಸಿಎಂ ಮತ್ತು ಬಿಎಸ್ ಯಡಿಯೂರಪ್ಪ ಅನುಭವಿ ಮುಖ್ಯಮಂತ್ರಿ ಎಂದು ಬಣ್ಣಿಸಿದರು. ಬೊಮ್ಮಾಯಿ ಅವರ ಅದೃಷ್ಟ ಮತ್ತು ಯಡಿಯೂರಪ್ಪನವರ ಅನುಭವ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲಿ ಎಂದು ಆಶಿಸಿದರು.










