ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೆಪಿಸಿಸಿ ಸಾಮಾಜಿಕ ಜಾಲತಾಣದಿಂದ ಮಾಡಲಾಗಿರುವ ಅವಹೇಳನಕಾರಿ ಟ್ವೀಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಈ ಟ್ವೀಟ್ ತೆಗೆದುಹಾಕಲು ಸೂಚನೆ ನೀಡಲಾಗಿದೆ. ಈ ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಮಾದವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಹೆಬ್ಬೆಟ್ ಗಿರಾಕಿ ಮೋದಿ’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿತ್ತು. ಇದೀಗ ಭಾರೀ ಆಕ್ರೋಶದ ನಂತರ ಎಚ್ಚೆತ್ತ ಕಾಂಗ್ರೆಸ್ ಹೆಬ್ಬೆಟ್ ಗಿರಾಕಿ ಮೋದಿ ಎಂದು ಬರೆಯಲಾಗಿದ್ದ ಎಲ್ಲ ಟ್ವೀಟ್ ಗಳನ್ನು ತನ್ನ ಖಾತೆಯಿಂದ ಡಿಲೀಟ್ ಮಾಡಿದೆ.
ಕಾಂಗ್ರೆಸ್ ಟ್ವೀಟ್ ನಲ್ಲಿ ಏನಿತ್ತು?
ಮೋದಿ ಅವರಿಗೆ ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ, ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ. ವಿದ್ಯಾಭ್ಯಾಸ ಬಿಟ್ಟು ಭಿಕ್ಷೆ ಬೇಡಿದವನಿಗೆ ಆರ್ಥಿಕತೆಯ ಗಂಧಗಾಳಿಯೇ ತಿಳಿದಿಲ್ಲ. ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ.
ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ಮೋದಿ ಅವರು ಓದಲಿಲ್ಲ. ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ. ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂದು ಪೆಟ್ರೋಲ್ 66, ಡೀಸೆಲ್ 55 ಕ್ಕೆ ದೊರಕುತ್ತಿತ್ತು. ಜನರನ್ನು ದೋಚಿ, ಉದ್ಯಮಿಗಳ ಹೊಟ್ಟೆ ತುಂಬಿಸುವ ಯೋಜನೆ ಹೊಂದಿರುವ ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಯಿಂದ ಎಲ್ಲಾ ಅಗತ್ಯ ವಸ್ತುಗಳು ದುಬಾರಿಯಾಗಿವೆ. ಜನರ ಕಷ್ಟಗಳನ್ನು ತಿಳಿಯದ #ಹೆಬ್ಬೆಟ್ಗಿರಾಕಿಮೋದಿ ಯಿಂದ ದೇಶ ನಲುಗುತ್ತಿದೆ ಎಂದು ಟ್ವೀಟ್ ಮಾಡಿತ್ತು.










