ನವದೆಹಲಿ : ಸುಡಾನ್ ನಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಸಿದಿರುವ ಚಿನ್ನದ ಗಣಿ ಪಶ್ಚಿಮ ಕೊರ್ಡೋಫಾನ್ ರಾಜ್ಯದ ಎಲ್ ನುಹುದ್ ಪಟ್ಟಣದ ಸಮೀಪದಲ್ಲಿದ್ದು, ಸುಡಾನ್ ನ ರಾಜಧಾನಿ ಖಾರ್ಟೂಮ್ ನ ಪಶ್ಚಿಮಕ್ಕೆ ಸುಮಾರು 500 ಕಿಮೀ ದೂರದಲ್ಲಿದೆ. ಈ ಪ್ರದೇಶವು ಗಣಿಗಾರಿಕೆಗೆ ಸೂಕ್ತವಲ್ಲ ಎಂದು ಕೊರ್ಡೋಫಾನ್ ರಾಜ್ಯ ಸರ್ಕಾರ ಮತ್ತು ರಾಜ್ಯದ ಭದ್ರತಾ ಸಮಿತಿಯು ನಿರ್ಧಾರಕ್ಕೆ ಬಂದಿದ್ದು, ಗಣಿಗಾರಿಕೆಯನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಆದರೆ ಸರ್ಕಾರದ ನಿರ್ಧಾರವನ್ನೂ ಕಡೆಗಣಿಸಿ ಗಣಿಗಾರರು ಇಲ್ಲಿ ಗಣಿಗಾರಿಕೆ ಮಾಡುತ್ತಿದ್ದರು.
ಅವಶೇಷಗಳಡಿ ಸಿಲುಕಿರುವ ಮೃತದೇಹಗಳ ತೆರವು, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಾಚರಣೆ ನಡೆಸುತ್ತಿರುವ ಹಾಗೂ ಸತ್ತವರನ್ನು ಹೂಳಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿರುವ ಫೋಟೋಗಳನ್ನು ಗಣಿ ಕಂಪನಿ ತನ್ನ ಫೇಸ್‌ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದೆ. ಆದರೆ ದುರ್ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.










